– ಪುಟ್ಟ ಕಂದನ ಕಳೆದುಕೊಂಡು ತಂದೆ ರೋಧನೆ
ಚಂಡೀಗಢ: ಆಡ ಆಡುತ್ತಿರುವಾಗ 3 ವರ್ಷದ ಮಗುವೊಂದು 250 ಅಡಿ ಆಳದ ಕೊಳವೆ ಬಾವಿಗೆ (ಬೋರ್ವೆಲ್) ಬಿದ್ದು ಸಾವನ್ನಪ್ಪಿರುವ ಘಟನೆ ಫರಿದಾಬಾದ್ನ ಸೀಹಿ (Seehi) ಗ್ರಾಮದಲ್ಲಿ ನಡೆದಿದೆ. ಸುಮಾರು 10 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ಬಳಿಕ ಬಾಲಕಿ ಮೃತಪಟ್ಟಿದ್ದಾಗಿ ಇಂದು ನಸುಕಿನ ಜಾವ ಅಧಿಕಾರಿಗಳು ತಿಳಿಸಿದ್ದಾರೆ.
ನೇಹಾ ಮೃತಪಟ್ಟ ಮೂರು ವರ್ಷದ ಮಗು. ಭಾನುವಾರ ಸಂಜೆ ಕೊಳವೆಬಾವಿಯ ಬಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಬಿದ್ದಿದೆ. ಸುಮಾರು 10 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ, ಸೋಮವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಆಕೆಯನ್ನ ಹೊರತೆಗೆಯಲಾಯಿತು.
ಆಕೆಯನ್ನು ಹೊರತೆಗೆದಾಗ ಆಕೆಯ ದೇಹದಲ್ಲಿ ಯಾವುದೇ ಚಲನವಲನ ಇರಲಿಲ್ಲ. ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು.

ಮಗು ಕೊಳವೆ ಬಾವಿಗೆ ಬಿದ್ದಿದ್ದು ಹೇಗೆ?
ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಸೀಹಿ ಗ್ರಾಮದಲ್ಲಿ ನಡೆದಿದೆ. ಘಟನಾ ಸ್ಥಳದ ಸಮೀಪ ಟ್ರ್ಯಾಕ್ಟರ್ವೊಂದನ್ನ ನಿಲ್ಲಿಸಲಾಗಿತ್ತು. ಮಕ್ಕಳು ಆಟವಾಡುತ್ತಾ ಅದರ ಮೇಲೆ ಹತ್ತಿದ್ದರು, ಈ ಪೈಕಿ ಮಗು ನೇಹಾ ಕೂಡ ಇತ್ತು. ಟ್ರ್ಯಾಕ್ಟರ್ ಮೇಲಿಂದ ಕಾಲು ಜಾರಿ ಬಿದ್ದಿದ್ದಾಳೆ ಎಂದು ಹೇಳಲಾಗಿದೆ.
ಮಾಹಿತಿ ತಿಳಿದ ತಕ್ಷಣ, ಎನ್ಡಿಆರ್ಎಫ್ (NDRF) ಮತ್ತು ಎಸ್ಡಿಆರ್ಎಫ್ (SDRF) ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು. ಆದ್ರೆ ಕತ್ತಲೆಯಿಂದಾಗಿ ಕಾರ್ಯಾಚರಣೆಗೆ ಅಡಚಣೆಯಾಗಿತ್ತು. ಬಳಿಕ ಕೊಳವೆಬಾವಿ ಸುತ್ತಲೂ ಲೈಟ್, ಟಾರ್ಚ್ ವ್ಯವಸ್ಥೆ ಮಾಡಲಾಯಿತು. ಪರಿಸ್ಥಿತಿ ಗಮನಿಸಲು ಕೊಳವೆ ಬಾವಿಯೊಳಗೆ ಕ್ಯಾಮೆರಾವನ್ನ ಇಳಿಸಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ ಮಗು ಅಳುತ್ತಿರುವ ಶಬ್ದವೂ ಕೇಳಿಬಂದಿತ್ತು.
ಬಾಲಕಿಯ ತಂದೆ ರಾಮ್ದಿನ್ ಹೇಳುವಂತೆ, ಈ ಕೊಳವೆಬಾವಿಯು ಫರಿದಾಬಾದ್ ಪುರಸಭೆಗೆ (ಮುನ್ಸಿಪಲ್ ಕಾರ್ಪೊರೇಷನ್) ಸೇರಿದ್ದು, ಸುಮಾರು 10 ವರ್ಷಗಳಿಂದ ಇದನ್ನ ಮುಚ್ಚಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಮತ್ತೆ ಓಪನ್ ಮಾಡಿದ್ದಾರೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೈನ್ಪುರಿಯವರಾದ ರಾಮ್ದಿನ್, ಈ ಗ್ರಾಮದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಕೂಡ ತಾವು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಗು ಕೊಳವೆ ಬಾವಿಗೆ ಬಿದ್ದಿದೆ. ಬಳಿಕ ಸ್ಥಳೀಯರು ಈ ವಿಷಯವನ್ನ ಮಗುವಿನ ತಂದೆಗೆ ತಿಳಿಸಿದ್ದಾರೆ. ನಂತರ ನಮಗೆ ಮಾಹಿತಿ ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

