ನವದೆಹಲಿ: ಭಾರತೀಯ ಬ್ಯಾಂಕ್ಗಳ ಒಕ್ಕೂಟ (IBA) ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ಇಂದು ರಾತ್ರಿ ನಡೆದ ಸಭೆ ಯಶಸ್ವಿಯಾಗಿದ್ದು ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು (Bank Strike) ಮುಂದೂಡಲಾಗಿದೆ.
ಮುಷ್ಕರದ ಕರೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು ಬ್ಯಾಂಕ್ ನೌಕರರಿಗೆ ಮನವಿ ಮಾಡಿದ್ದು, ಅವರ ಬಹುತೇಕ ಸಮಸ್ಯೆಗಳನ್ನು ಈಗಾಗಲೇ ಮಾತುಕತೆ ಮತ್ತು ಕಲ್ಯಾಣ ಕ್ರಮಗಳ ಮೂಲಕ ಬಗೆಹರಿಸಲಾಗಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 28 ರಿಂದ 30ರ ಅವಧಿಯಲ್ಲಿ ಮುಷ್ಕರ ನಡೆಸಿದರೆ ಅದು ಬ್ಯಾಂಕಿಂಗ್ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದು ಬ್ಯಾಂಕುಗಳ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯ ಸಮಯವಾಗಿದೆ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು.
ಸಾರ್ವಜನಿಕ ವಲಯದ ಬ್ಯಾಂಕ್ಗಳು 2014-15ರಿಂದ 2025-26ರ ಹಣಕಾಸು ವರ್ಷಗಳ ನಡುವೆ ಸುಮಾರು 4.83 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ ಆಗಸ್ಟ್ 2024ರಲ್ಲಿ ಸಿಬ್ಬಂದಿ ಕಲ್ಯಾಣ ನಿಧಿಯನ್ನು ಶೇ. 56 ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಪಿಂಚಣಿ, ವಿಸ್ತೃತ ವೈದ್ಯಕೀಯ ವಿಮೆ, ಸರಳೀಕೃತ ಬಡ್ತಿ ಮತ್ತು ವರ್ಗಾವಣೆ ನೀತಿಗಳು ಹಾಗೂ ವಿಶೇಷ ರಜೆ ಸೌಲಭ್ಯಗಳು ಸೇರಿದಂತೆ ಹಲವು ಕಲ್ಯಾಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ನೌಕರರ ಬೇಡಿಕೆ ಏನಿತ್ತು?
2024ರ ವೇತನ ಪರಿಷ್ಕರಣೆ ಒಪ್ಪಂದದಿಂದ ಬಾಕಿ ಉಳಿದಿರುವ ‘ವಾರಕ್ಕೆ 5 ದಿನಗಳ ಕೆಲಸ’ದ ಪ್ರಸ್ತಾವನೆಯನ್ನು ತಕ್ಷಣವೇ ಜಾರಿಗೊಳಿಸಬೇಕು.
ಏಕಪಕ್ಷೀಯವಾಗಿ ಮತ್ತು ತಾರತಮ್ಯದಿಂದ ಕೂಡಿದ ರೀತಿಯಲ್ಲಿ ಪರಿಷ್ಕರಿಸಲಾಗಿದೆ ಎನ್ನಲಾದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ನಿಯಮಗಳನ್ನು ಬದಲಾಯಿಸಬೇಕು.
ಪಿಂಚಣಿ ಮೊತ್ತವನ್ನು ಹೆಚ್ಚಿಸುವುದು ಹಾಗೂ ನಿವೃತ್ತ ನೌಕರರಿಗೆ ಏಕರೂಪದ ತುಟ್ಟಿಭತ್ಯೆ (DA) ಸೂತ್ರವನ್ನು ಅಳವಡಿಸುವುದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಬದಲಿಗೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವುದು. ಬಾಕಿ ಉಳಿದಿರುವ ವೇತನ ಹಾಗೂ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

