ಬೆಂಗಳೂರು: ರಾಜಕೀಯ ವೇದಿಕೆಗಳಲ್ಲಿ ತಮ್ಮ ಭಾಷಣದ ವೇಳೆ ಸಂಸ್ಕೃತ ಶ್ಲೋಕಗಳನ್ನು ನಿರರ್ಗಳವಾಗಿ ಉಲ್ಲೇಖಿಸುವ ಹಿಂದಿನ ರೋಚಕ ಗುಟ್ಟನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಬಹಿರಂಗಪಡಿಸಿದ್ದಾರೆ.
ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್(HR Ranganath) ಕೇಳಿದ ಪ್ರಶ್ನೆಗೆ ಸಂಸ್ಕೃತ(Sanskrit) ಕಲಿಯಲು ಮತ್ತು ಧಾರ್ಮಿಕ ಗ್ರಂಥಗಳ ಅಧ್ಯಯನಕ್ಕೆ ತಮಗೆ ಪ್ರೇರಣೆ ಸಿಕ್ಕ ಹಿನ್ನೆಲೆಯನ್ನು ಅವರು ಹಂಚಿಕೊಂಡಿದ್ದಾರೆ.
ಡಿಕೆಶಿ ಹೇಳಿದ್ದೇನು?
ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲವದು. ಕುಂಬಳಗೋಡಿನಲ್ಲಿ ಆದಿಚುಂಚನಗಿರಿ ಮಠದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ 50ನೇ ಜನ್ಮದಿನೋತ್ಸವ ಕಾರ್ಯಕ್ರಮ ಆಯೋಜನೆಯಾಗಿತ್ತು. ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಅವರ ಉಪಸ್ಥಿತಿ ಸೇರಿದಂತೆ ವೇದಿಕೆಯ ಮೇಲೆ ಸುಮಾರು 50ರಿಂದ 100 ಮಂದಿ ಮಠಾಧೀಶರು ಆಸೀನರಾಗಿದ್ದರು. ಅಂದುಸತ್ಯ ಸಾಯಿಬಾಬಾ ಅವರು ಭಗವದ್ಗೀತೆಯ 8 ಶ್ಲೋಕಗಳನ್ನು ಉಲ್ಲೇಖಿಸಿ ಅದ್ಭುತವಾಗಿ ಭಾಷಣ ಮಾಡಿದ್ದರು.
ದುಡ್ಡು ಮತ್ತು ಬ್ಲಡ್ ನಿರಂತರವಾಗಿ ಸಂಚರಿಸುತ್ತಿರಬೇಕು. ದುಡ್ಡು ಜಾಸ್ತಿಯಾದರೆ ಅಪಾಯ ಜಾಸ್ತಿ. ಕಳ್ಳರು ಬರುತ್ತಾರೆ. ಅದೇ ರೀತಿ ರಕ್ತ ಒಂದು ಕಡೆ ಇದ್ದರೆ ಬಿಪಿ, ಶುಗರ್ ಬರುತ್ತದೆ. ರಕ್ತ ದೇಹದಲ್ಲಿ ಸರಿಯಾಗಿ ಸಂಚರಿಸುತ್ತಲೇ ಇರಬೇಕು ಎಂದು ಹೇಳಿದ್ದರು. ಆ ಭಾಷಣ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಅಲ್ಲಿಯವರೆಗೆ ಅಂಥ ಧಾರ್ಮಿಕ ಭಾಷಣವನ್ನು ನಾನು ಕೇಳಿರಲಿಲ್ಲ. ಇಂದಿಗೂ ಆ ಭಾಷಣದ ಕ್ಯಾಸೆಟ್ ನನಗಿನ್ನೂ ಸಿಕ್ಕಿಲ್ಲ. ಇದನ್ನೂ ಓದಿ: ಕೆಟ್ಟು ಅನ್ನೋದನ್ನ ನೋಡಬಾರದು, ಮುಟ್ಟಬಾರದು, ಆಡಬಾರದು – ಡಿಕೆಶಿಗೆ ನೊಣವಿನಕೆರೆ ಶ್ರೀಗಳ ಹಿತವಚನ
ಮೂರು ಧಾರಾವಾಹಿಗಳ ಪೈಕಿ ಮಹಾಭಾರತ ನನ್ನ ಮೇಲೆ ಅತಿಹೆಚ್ಚು ಪ್ರಭಾವ ಬೀರಿತು. ಜೀವನದಲ್ಲಿ ಯಾವುದೇ ವ್ಯಕ್ತಿ ಯಶಸ್ಸು ಕಾಣಬೇಕಾದರೆ ಮಹಾಭಾರತದ ಪಾತ್ರಗಳ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಈ ಸಾಲನ್ನು ನಾನು ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಧರ್ಮರಾಯನ ಧರ್ಮತ್ವ ಇರಬೇಕು. ಕರ್ಣನ ತ್ಯಾಗ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಸಂದರ್ಭಕ್ಕೆ ತಕ್ಕಂತೆ ಹೆಣೆಯುವ ಚಾಣಾಕ್ಷ ತಂತ್ರಗಾರಿಕೆ. ಇವೆಲ್ಲವೂ ಮೈಗೂಡಿದಾಗ ಮಾತ್ರ ಜೀವನದಲ್ಲಿ ಪರಿಪೂರ್ಣ ಯಶಸ್ಸು ಗಳಿಸಲು ಸಾಧ್ಯ ಎಂದು ಡಿಕೆಶಿ ಅಭಿಪ್ರಾಯಪಟ್ಟರು.

