ಬೆಂಗಳೂರು: ಹೊರ ಊರುಗಳಿಂದ ನಗರಕ್ಕೆ ಆಗಮಿಸುವ ವೀರಶೈವ-ಲಿಂಗಾಯತ(Veerashaiva-Lingayat) ಮಠಾಧೀಶರು ಹಾಗೂ ಭಕ್ತಾದಿಗಳು ತಂಗಲು ಅನುಕೂಲವಾಗುವಂತೆ ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ಮಂಜೂರು ಮಾಡಲು ರಾಜ್ಯ ಸರ್ಕಾರ(Karnataka Govt) ತೀರ್ಮಾನಿಸಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್(DK Shivakumar) ಈ ಮಹತ್ವದ ಘೋಷಣೆ ಮಾಡಿದರು.
ಸಮ್ಮೇಳನದಲ್ಲಿ ಮಾತನಾಡಿದ ಅವರು, ಹೊರ ಊರುಗಳಿಂದ ರಾಜಧಾನಿಗೆ ಬರುವ ಮಠಾಧೀಶರು ಮತ್ತು ಭಕ್ತರಿಗೆ ಉಳಿದುಕೊಳ್ಳಲು ಸೂಕ್ತ ಸೌಲಭ್ಯ ಕಲ್ಪಿಸಲು ಜಾಗ ನೀಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದರು. ಅದಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗವನ್ನು ಸರ್ಕಾರ ನೀಡಲಿದೆ. ‘ಜಾಗ ನಮ್ಮದು, ಕಟ್ಟಡ ನಿಮ್ಮದು’. ಈ ಭವನಕ್ಕೆ ವೀರಗಂಗಾಧರ ಸ್ವಾಮೀಜಿ ಹೆಸರಿಡುತ್ತೀರೋ ಅಥವಾ ಬೇರೆ ಮಹನೀಯರ ಹೆಸರಿಡುತ್ತೀರೋ ಅದು ನಿಮಗೆ ಬಿಟ್ಟ ವಿಚಾರ ಎಂದರು.

ಕೇವಲ ವೀರಶೈವ-ಲಿಂಗಾಯತ ಸಮಾಜ ಒಗ್ಗೂಡಿದರೆ ಸಾಲದು, ಸಮಾಜದ ಎಲ್ಲ ವರ್ಗಗಳನ್ನೂ ಜತೆಯಾಗಿ ಕೊಂಡೊಯ್ಯಬೇಕು. ಪ್ರಸ್ತುತ ದಿನಗಳಲ್ಲಿ ಮಠಗಳಿಗೆ ಜಾತಿ ಅನಿವಾರ್ಯವೆನಿಸಿದರೂ, ಮಾನವ ಧರ್ಮದ ಪ್ರತಿಪಾದನೆಯಿಂದ ಮಾತ್ರ ಮಠಗಳಿಗೆ ನಿಜವಾದ ಶಕ್ತಿ ಬರುತ್ತದೆ. ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ತತ್ವವನ್ನು ಮರೆಯದೆ ನಾವೆಲ್ಲರೂ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಮಾತನಾಡಿ, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ, ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಶ್ವದ ಯಾವುದೇ ಶಕ್ತಿಯೂ ಇವೆರಡನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಪ್ರಸ್ತುತ ಸಮುದಾಯವು ಕವಲು ದಾರಿಯಲ್ಲಿದ್ದು, ಎಲ್ಲ ಒಳಪಂಗಡಗಳು ಭಿನ್ನಾಭಿಪ್ರಾಯ ಮರೆತು ಒಗ್ಗೂಡಬೇಕು, ಸಂಘಟಿತರಾಗಿ ಬಲಿಷ್ಠರಾಗಬೇಕು” ಎಂದು ಕರೆ ನೀಡಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಜಾತ್ಯತೀತ ನಿಲುವನ್ನು ಅವರು ಶ್ಲಾಘಿಸಿದರು.

