– 20 ಮೀಟರ್ ಎತ್ತರದ ತಡೆಗೋಡೆ ನಿರ್ಮಾಣಕ್ಕೆ ಚಿಂತನೆ
– 7.5 ಕಿ.ಮೀ. ನದಿ ತೀರದಲ್ಲಿ ಸಮಗ್ರ ಅಭಿವೃದ್ಧಿ
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಪ್ರತಿವರ್ಷ ಕಾವೇರಿ ನದಿ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. 2018 ರಿಂದ ಸತತ ಮೂರು ವರ್ಷಗಳ ಕಾಲ ಉಂಟಾದ ಪ್ರವಾಹದಿಂದ ಹಲವು ಬಡಾವಣೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬರೋಬ್ಬರಿ 800 ಕೋಟಿ ರೂ. ವೆಚ್ಚದ ಸಮಗ್ರ ಪ್ರವಾಹ ನಿಯಂತ್ರಣ ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ.
ಕಾವೇರಿ ನಿಸರ್ಗಧಾಮದ ಬಳಿಯಿಂದ ಗುಮ್ಮನಕೊಲ್ಲಿ, ಕೂಡ್ಲೂರು ಹಾಗೂ ಕೂಡ್ಲುಮಂಗಳೂರು ವ್ಯಾಪ್ತಿಯವರೆಗೆ ಸುಮಾರು 7.5 ಕಿಲೋಮೀಟರ್ ಉದ್ದದ ಕಾವೇರಿ ನದಿ ತೀರದಲ್ಲಿ ಈ ಯೋಜನೆ ರೂಪಿಸಲಾಗಿದೆ. ಯೋಜನೆ ಅನುಷ್ಠಾನಗೊಂಡರೆ ಪ್ರವಾಹ ನಿಯಂತ್ರಣದ ಜೊತೆಗೆ ನದಿ ತೀರದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೂ ಒತ್ತು ನೀಡುವ ಉದ್ದೇಶ ಹೊಂದಿದೆ.

3 ಹಂತಗಳಲ್ಲಿ ಡ್ರೋನ್ ಸರ್ವೆ
ಕಾವೇರಿ ನೀರಾವರಿ ನಿಗಮದ ಉಸ್ತುವಾರಿಯಲ್ಲಿ 2022ರಲ್ಲಿ ಮಂಗಳೂರಿನ ಬ್ರಹ್ಮರ್ ಟೆಕ್ನಾಲಜೀಸ್ ಸಂಸ್ಥೆಯಿಂದ ಮೂರು ಹಂತಗಳಲ್ಲಿ ಡ್ರೋನ್ ಸರ್ವೆ ನಡೆಸಲಾಗಿದೆ. ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳು, ನೀರಿನ ಹರಿವು, ನೀರಿನ ಮಟ್ಟ ಹಾಗೂ ಪ್ರವಾಹದ ವ್ಯಾಪ್ತಿ ಸೇರಿದಂತೆ ಹಲವು ಮಾಹಿತಿಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಸಮಗ್ರ ವರದಿ ಸಿದ್ಧಪಡಿಸಲಾಗಿದೆ.
ಹಿಂದಿನ ಮಳೆಗಾಲದ ದಾಖಲೆಗಳು ಹಾಗೂ ಸತತ ಮೂರು ವರ್ಷಗಳ ಪ್ರವಾಹ ಪರಿಸ್ಥಿತಿಯನ್ನು ಆಧರಿಸಿ ಕಾವೇರಿ ನದಿಯ ಗರಿಷ್ಠ ಪ್ರವಾಹ ಮಟ್ಟವನ್ನೂ ಗುರುತಿಸಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪ್ರವಾಹದ ಪರಿಣಾಮವನ್ನು ನಿಯಂತ್ರಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.

20 ಮೀಟರ್ ಎತ್ತರದ ತಡೆಗೋಡೆ!
ಯೋಜನೆಯ ಪ್ರಮುಖ ಅಂಶವಾಗಿ ಪ್ರವಾಹಕ್ಕೆ ತುತ್ತಾಗುವ ನದಿ ತೀರದ ಪ್ರದೇಶಗಳಲ್ಲಿ 20 ಮೀಟರ್ ಎತ್ತರದ ತಡೆಗೋಡೆ ನಿರ್ಮಿಸುವ ಪ್ರಸ್ತಾವನೆ ಮಾಡಲಾಗಿದೆ. ಮಳೆಗಾಲದಲ್ಲಿ ಪ್ರವಾಹದ ನೀರು ಬಡಾವಣೆಗಳಿಗೆ ನುಗ್ಗದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದರೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ, ವಾಕಿಂಗ್ ಪಾಥ್, ಉದ್ಯಾನವನ ಹಾಗೂ ಹಸಿರು ಪ್ರದೇಶಗಳ ಅಭಿವೃದ್ಧಿಗೂ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮಳೆ ನೀರು ಹರಿಸಲು ಗೇಬಿಯನ್ ವಾಲ್
ಬಡಾವಣೆಗಳಿಂದ ಹೊರಹೋಗುವ ಮಳೆ ನೀರನ್ನ ನದಿಗೆ ಸುರಕ್ಷಿತವಾಗಿ ಹರಿಸಲು ಗೇಬಿಯನ್ ವಾಲ್ ತಂತ್ರಜ್ಞಾನ ಬಳಸುವ ಪ್ರಸ್ತಾವನೆಯೂ ಇದೆ. ಇದರಿಂದ ಮಳೆಗಾಲದಲ್ಲಿ ಬಡಾವಣೆಗಳಲ್ಲಿ ನೀರು ನಿಲ್ಲುವ ಸಮಸ್ಯೆಯನ್ನ ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ.

ಕಾವೇರಿ ಆರತಿ ಕೇಂದ್ರ, ಆಂಫಿ ಥಿಯೇಟರ್‌ಗೂ ಪ್ರಸ್ತಾವನೆ
ಯೋಜನೆ ಕೇವಲ ಪ್ರವಾಹ ನಿಯಂತ್ರಣಕ್ಕೆ ಸೀಮಿತವಾಗಿಲ್ಲ. ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪದ ನದಿ ತೀರದಲ್ಲಿ ಕಾವೇರಿ ಆರತಿ ಕೇಂದ್ರ, ಆಂಫಿ ಥಿಯೇಟರ್ ಹಾಗೂ ಮನರಂಜನಾ ವ್ಯವಸ್ಥೆ ನಿರ್ಮಿಸುವ ಪ್ರಸ್ತಾವನೆಯೂ ಇದೆ. ಸ್ಥಳೀಯ ವ್ಯಾಪಾರ-ವಹಿವಾಟು ಹೆಚ್ಚಿಸುವ ಜೊತೆಗೆ ಜನರಿಗೆ ಆದಾಯದ ಅವಕಾಶಗಳನ್ನ ಕಲ್ಪಿಸುವ ಉದ್ದೇಶದಿಂದ ವ್ಯಾಪಾರಿ ಕೇಂದ್ರಗಳ ಅಭಿವೃದ್ಧಿಗೂ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ.
2 ಕೋಟಿ ವೆಚ್ಚದಲ್ಲಿ ಹೂಳು ತೆರವು ಕಾಮಗಾರಿ
ಈ ಹಿಂದೆ ಪ್ರವಾಹದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅವಧಿಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನದಿಯ ಹೂಳು ತೆರವು ಕಾಮಗಾರಿ ಕೈಗೊಳ್ಳಲಾಗಿತ್ತು. ಇದರಿಂದ ಹಲವು ಬಡಾವಣೆಗಳ ನಿವಾಸಿಗಳಿಗೆ ತಾತ್ಕಾಲಿಕ ನೆಮ್ಮದಿ ದೊರೆತಿತ್ತು. ಆದರೆ, ಈ ಹಿಂದೆ ನಿರ್ಮಿಸಲಾಗಿದ್ದ ತಡೆಗೋಡೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ ಎಂದು ಪ್ರವಾಹ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಮತ್ತೆ 800 ಕೋಟಿ ರೂ. ವೆಚ್ಚದ ಬೃಹತ್ ಸಮಗ್ರ ಪ್ರವಾಹ ನಿಯಂತ್ರಣ ಯೋಜನೆ ಸರ್ಕಾರದ ಮುಂದಿದೆ. ಸುಮಾರು 400 ಪುಟಗಳ ಸಮಗ್ರ ವರದಿಯನ್ನು ಕಾವೇರಿ ನೀರಾವರಿ ನಿಗಮದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಯೋಜನೆಯನ್ನು ಪರಿಶೀಲಿಸಿ ಅನುಮೋದನೆ ನೀಡುವುದಷ್ಟೇ ಬಾಕಿಯಿದೆ.


