ಮಡಿಕೇರಿ: ನಾಡಹಬ್ಬ ಮೈಸೂರು ದಸರಾಕ್ಕೂ ಮುನ್ನವೇ ಮಂಜಿನ ಮಡಿಕೇರಿಯಲ್ಲಿ ದಸರಾ (Madikeri Dasara) ಸಂಭ್ರಮ ಕಳೆಗಟ್ಟಿದೆ. ಶಾಂತಿನಿಕೇತನ ಯುವಕ ಸಂಘದ 48ನೇ ವರ್ಷದ ಅದ್ಧೂರಿ ಗಜೋತ್ಸವದ ಶೋಭಾಯಾತ್ರೆ ಶನಿವಾರ ರಾತ್ರಿ ನಡೆಯಿತು. ಈ ಬಾರಿ ವಿಶೇಷ ಆಕರ್ಷಣೆಯಾಗಿದ್ದು, ಪೌರಾಣಿಕ ಕಥಾಹಂದರ ಆಧರಿಸಿದ ‘ನೂಪುರಾಸುರ ಸಂಹಾರ’ದ ಚಲಿಸುವ ಮಂಟಪ.
ಹೌದು. ಶಾಂತಿನಿಕೇತನ ಯುವಕ ಸಂಘದ 48ನೇ ವರ್ಷದ ಗಜೋತ್ಸವದ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ವೈಭವಗಳು ಜನರನ್ನ ಸೆಳೆದವು. ವಿಶೇಷವಾಗಿ ‘ನೂಪುರಾಸುರ ಸಂಹಾರ’ದ ಚಲಿಸುವ ಮಂಟಪ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.

ಪುರಾಣ ಕಥೆಯ ಪ್ರಕಾರ, ಗಣಪತಿ ಕೈಲಾಸದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ, ತ್ರಿಲೋಕವನ್ನೇ ಗೆಲ್ಲುವ ದುರಾಸೆಯಿಂದ ನೂಪುರಾಸುರನು ಗಣಪತಿಯ ಕಾಲ್ಗೆಜ್ಜೆಯೊಳಗೆ ಪ್ರವೇಶಿಸಿ, ಗಣಪತಿಯನ್ನ ಅಪಹರಿಸಲು ಯತ್ನಿಸುತ್ತಾನಂತೆ. ಬಳಿಕ ಗಣಪತಿ ಹಾಗೂ ನೂಪುರಾಸುರನ ನಡುವಿನ ಸಂಘರ್ಷ ಮತ್ತು ಅಂತಿಮ ಸಂಹಾರದ ಕಥೆಯನ್ನ ಚಲಿಸುವ ದೃಶ್ಯಗಳ ಮೂಲಕ ಮಂಟಪದಲ್ಲಿ ಅದ್ಭುತವಾಗಿ ಬಿಂಬಿಸಲಾಗಿತ್ತು.
ಹಲವು ದಿನಗಳ ಕಾಲ ಸಂಘದ ಸದಸ್ಯರು ಹಾಗೂ ಯುವಕರು ಶ್ರಮಿಸಿ ಈ ಪೌರಾಣಿಕ ಕಥೆಯನ್ನ ಕಲಾತ್ಮಕವಾಗಿ ಮಂಟಪದಲ್ಲಿ ಮೂಡಿಸಿದ್ದಾರೆ. ಗಜೋತ್ಸವದ ಶೋಭಾಯಾತ್ರೆಯಲ್ಲಿ ಈ ಮಂಟಪ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು.

