– ಇಂದು ಸಹ ಭಾರೀ ಮಳೆಯ ಮುನ್ಸೂಚನೆ
ಲಕ್ನೋ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಕಳೆದ 48 ಗಂಟೆಗಳಲ್ಲಿ ಸಂಭವಿಸಿದ ಭಾರೀ ಮಳೆಗೆ 15 ಮಂದಿ ಬಲಿಯಾಗಿದ್ದಾರೆ. 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇಂದು ಕೂಡ ಭಾರೀ ಮಳೆಯ ಮುನ್ಸೂಚನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ 19 ಪಟ್ಟು ಹೆಚ್ಚು ಮಳೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಗಳಿಗೆ ಭಾರೀ ಹಾನಿಯಾಗಿದೆ ಹಾಗೂ 4 ಜಾನುವಾರುಗಳು ಸಾವನ್ನಪ್ಪಿವೆ ಎಂದು ವರದಿಗಳು ತಿಳಿಸಿವೆ.
ಎಲ್ಲೆಲ್ಲಿ ಎಷ್ಟು ಮಳೆ?
ರಾಜ್ಯ ರಾಜಧಾನಿ ಲಕ್ನೋದಲ್ಲಿ ಇಂದು ಬೆಳಗಿನ ಜಾವದವರೆಗೆ 125.8 ಮಿ.ಮೀ ಮಳೆಯಾಗಿದೆ. ಫರುಖಾಬಾದ್ ಮತ್ತು ಕಾನ್ಪುರ ನಗರದಲ್ಲಿ ಕ್ರಮವಾಗಿ ವಾಡಿಕೆಗಿಂತ 200 ಮತ್ತು 160 ಪಟ್ಟು ಹೆಚ್ಚು ಮಳೆಯಾಗಿದ್ದರಿಂದ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಅದೇ ವೇಳೆ, ಕನ್ನೌಜ್, ಕಾನ್ಪುರ ದೇಹಾತ್ ಮತ್ತು ಹರ್ದೋಯ್ ಜಿಲ್ಲೆಗಳಲ್ಲಿ ವಾಡಿಕೆಗಿಂತ 130 ಪಟ್ಟು ಹೆಚ್ಚು ಮಳೆಯಾಗಿದೆ.
ಭಾನುವಾರವಾದ ಇಂದು ಕೂಡ ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಪರಿಸ್ಥಿತಿ ಮೇಲೆ ಸಿಎಂ ಯೋಗಿ ನಿಗಾ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ರಾಜ್ಯಾದ್ಯಂತ ಭಾರಿ ಮಳೆಯಿಂದ ಸಂತ್ರಸ್ತರಾದ ಜನರಿಗೆ ತಕ್ಷಣದ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಅತಿಯಾದ ಮಳೆಯಿಂದಾಗಿ ಸಂಭವಿಸಿದ ಜೀವಹಾನಿ, ಜಾನುವಾರುಗಳ ನಷ್ಟ ಮತ್ತು ಮನೆಗಳ ಹಾನಿಗೆ ತ್ವರಿತ ಪರಿಹಾರ ನೀಡುವಂತೆ ಜೊತೆಗೆ ಪರಿಹಾರ ಫಲಾನುಭವಿಗಳನ್ನು ಖಚಿತಪಡಿಸಿಕೊಳ್ಳುವಂತೆ, ಹಾಗೆಯೇ ಬೆಳೆ ನಷ್ಟದ ತಕ್ಷಣದ ಮೌಲ್ಯಮಾಪನ ನಡೆಸಿ ರೈತರಿಗೆ ಸಮಯೋಚಿತ ಪರಿಹಾರ ಒದಗಿಸುವಂತೆ ಸೂಚನೆ ನೀಡಲಾಗಿದೆ.

