ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ‘ಮ್ಯಾರಥಾನ್ 2026’ ನಡೆಯಲಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಈ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ನಗರದಲ್ಲಿ 13ನೇ ಆವೃತ್ತಿಯ ‘Bengaluru Marathon’ ಆಯೋಜನೆ ಮಾಡಲಾಗಿದೆ. ಕಂಠೀರವ ಕ್ರೀಡಾಂಗಣದಿಂದ ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಮೂರು ಆವೃತ್ತಿಯಲ್ಲಿ ಮ್ಯಾರಥಾನ್ ನಡೆಯಲಿದೆ. ಸುಮಾರು 25,000 ಸ್ಪರ್ಧಿಗಳು ಭಾಗವಹಿಸಲಿದ್ದು, ಸಂಚಾರ ಬದಲಾವಣೆ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧವಿದ್ದು, ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ಸಂಚಾರ ನಿಷೇಧಿಸಿರುವ ಪ್ರಮುಖ ರಸ್ತೆಗಳು
ಕಸ್ತೂರ್ ಬಾ ರಸ್ತೆ (ಹಡ್ಸನ್ ಜಂಕ್ಷನ್‌ನಿಂದ ಕ್ವೀನ್ಸ್ ಜಂಕ್ಷನ್‌ವರೆಗೆ)
ಎಂ.ಜಿ. ರಸ್ತೆ (ಕ್ವೀನ್ಸ್ ಜಂಕ್ಷನ್‌ನಿಂದ ಮೇಯೋ ಹಾಲ್ ಜಂಕ್ಷನ್‌ವರೆಗೆ)
ಕ್ವೀನ್ಸ್ ರಸ್ತೆ (ಕ್ವೀನ್ಸ್ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್‌ವರೆಗೆ ಎರಡೂ ಕಡೆಗಳಲ್ಲಿ)
ಸೆಂಟ್ರಲ್ ಸ್ಟ್ರೀಟ್ (ಅನಿಲ್ ಕುಂಬ್ಳೆ ಜಂಕ್ಷನ್‌ನಿಂದ ಸೆಂಟ್ರಲ್ ಸ್ಟ್ರೀಟ್)
ಕಬ್ಬನ್ ರಸ್ತೆ, ಲಿಂಕ್ ರಸ್ತೆ, ಡಿಕನ್ಸನ್ ರಸ್ತೆ, ರಾಜಾರಾಮ್ ಮೋಹನ್‌ರಾಯ್ ರಸ್ತೆ
ಪರ್ಯಾಯ ಸಂಚಾರ ಮಾರ್ಗಗಳು
ಜೆ.ಸಿ. ರಸ್ತೆ/ಮಾರ್ಕೆಟ್ ಕಡೆಯಿಂದ ಎಂ.ಜಿ. ರಸ್ತೆ/ಹಲಸೂರು ಕಡೆಗೆ: ಹೆಚ್.ಎಲ್.ಡಿ. ಜಂಕ್ಷನ್‌ನಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು, ದೇವಂಗಾ ಜಂಕ್ಷನ್, ಮಿಷನ್ ರಸ್ತೆ ಫ್ಲೈಓವರ್ ಅಥವಾ ಶಾಂತಿನಗರ ಜಂಕ್ಷನ್ ಮೂಲಕ ರಿಚ್ಮಂಡ್ ಜಂಕ್ಷನ್/ರೆಸಿಡೆನ್ಸಿ ರಸ್ತೆ ಕಡೆಗೆ ಸಾಗುವುದು.
ಜೆ.ಸಿ. ರಸ್ತೆಯಿಂದ ವಿಧಾನಸೌಧ/ಶಿವಾಜಿನಗರ/ರಾಜಭವನ ಕಡೆಗೆ: ಪೋಲಿಸ್ ಕಾರ್ನರ್, ಕೆ.ಜಿ. ರಸ್ತೆ – ಹಳೆ ಅಂಚೆ ಕಚೇರಿ ರಸ್ತೆ – ಕೆ.ಆರ್. ವೃತ್ತದ ಮಾರ್ಗವಾಗಿ ಅಂಬೇಡ್ಕರ್ ರಸ್ತೆಯ ಪಶ್ಚಿಮ ಭಾಗದ ಮೂಲಕ ಚಲಿಸಬಹುದು.
ಹೊಸೂರು ರಸ್ತೆ/ಕೋರಮಂಗಲ ಕಡೆಯಿಂದ ಏರ್‌ಪೋರ್ಟ್ ರಸ್ತೆ ಕಡೆಗೆ: ಅಶೋಕನಗರ ಸಿಗ್ನಲ್, ರಿಚ್ಮಂಡ್ ರಸ್ತೆ, ಆರ್‌ಆರ್‌ಎಂಆರ್ ರಸ್ತೆ, ಹಡ್ಸನ್ ವೃತ್ತ, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ ಮೂಲಕ ಸಂಚಾರ.
ವಾಹನ ನಿಲುಗಡೆ ಸ್ಥಳ
ಮ್ಯಾರಥಾನ್‌ನಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಸ್ಪರ್ಧಿಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಯು.ಬಿ.ಸಿಟಿ, ಫ್ರೀಡಂಪಾರ್ಕ್, ಸೇಂಟ್ ಜೋಸೆಫ್ ಕಾಲೇಜು ಮೈದಾನ, ಗರುಡ ಮಾಲ್‌ನಲ್ಲಿ ಪಾರ್ಕಿಂಗ್ ಇದೆ. ಮ್ಯಾರಥಾನ್ ಮಾರ್ಗದುದ್ದಕ್ಕೂ ಕಸ್ತೂರ್ ಬಾ ರಸ್ತೆ, ಎಂ.ಜಿ. ರಸ್ತೆ, ಕಬ್ಬನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

