– ಸರ್ವಾನುಮತದ ನಿರ್ಣಯ ಬಗ್ಗೆ ಸ್ಪಷ್ಟನೆ
ನವದೆಹಲಿ: ಎಸ್ಐಆರ್ ವಿವಾದದ ನಡುವೆ ಚುನಾವಣಾ ಆಯೋಗದ ಮೊದಲ ಸಭೆ ನಡೆಯಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಭಾಗಿಯಾಗಿದ್ದರು. ಎಸ್ಐಆರ್ ಆದೇಶ ಮತ್ತು ನಂತರ ವೇಳಾಪಟ್ಟಿಗಳನ್ನು ಪೂರ್ಣ ಆಯೋಗವು ಸರ್ವಾನುಮತದಿಂದ ಅನುಮೋದಿಸಿದೆ ಎಂದು ಚುನಾವಣಾ ಆಯೋಗವು ಪುನರುಚ್ಚರಿಸಿದೆ.
ಮತದಾರರಿಗೆ ಪರಿಶೀಲನಾ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಘೋಷಿಸಿದೆ. ದಾಖಲೆಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗದ ಕಾರಣ ಅಥವಾ ತಾರ್ಕಿಕ ವ್ಯತ್ಯಾಸಗಳ ಕಾರಣದಿಂದಾಗಿ ನೋಟಿಸ್ಗಳನ್ನು ಸ್ವೀಕರಿಸುವ ಮತದಾರರು, ಸಾಮಾನ್ಯವಾಗಿ ಚುನಾವಣಾ ನೋಂದಣಿ ಅಧಿಕಾರಿಯ (ಇಆರ್ಓ) ಮುಂದೆ ಹಾಜರಾಗುವ ಅಗತ್ಯವಿರುವುದಿಲ್ಲ. ಬದಲಿಗೆ ಬಿಎಲ್ಓಗಳೇ ಅಂತಹ ಮತದಾರರ ಮನೆಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ಇಸಿಐನೆಟ್ ಆ್ಯಪ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಚಾರಣೆಗಳನ್ನು ನಡೆಸಲಾಗುವುದು. ಸಾಧ್ಯವಾದಷ್ಟು ಮಟ್ಟಿಗೆ ಆನ್ಲೈನ್ ಮೂಲಕ ನಡೆಸಲಾಗುವುದು. ಮತದಾರರ ಪರವಾಗಿ ಅಧಿಕೃತ ಕುಟುಂಬದ ಸದಸ್ಯರೂ ಸಹ ಹಾಜರಾಗಬಹುದು ಅಂತ ನಿರ್ಧಾರ ಮಾಡಿದೆ.
ಈ ಬೆನ್ನಲ್ಲೇ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ. ಸರಣಿ ಸೋಲುಗಳಿಂದ ಕಂಗೆಟ್ಟು, ಈಗ ಸಾಂವಿಧಾನಿಕ ಸಂಸ್ಥೆಗಳಿಗೆ ಕಳಂಕ ತರಲು ಯತ್ನಿಸ್ತಿದ್ದಾರೆ ಅಂದಿದೆ.
ರಾಹುಲ್ ಗಾಂಧಿ ಕಿಡಿಕಾರಿ, ಇದು ಚುನಾವಣಾ ಆಯೋಗ ಮತ್ತು ಬಿಜೆಪಿ ನಡುವಿನ ಮ್ಯಾಚ್ ಫಿಕ್ಸಿಂಗ್ ಅಂತ ಟೀಕಿಸಿದ್ದಾರೆ.

