ನಗೋಯಾ: ಏಷ್ಯನ್ ಗೇಮ್ಸ್ನ (Asian Games 2026) 7ನೇ ದಿನದಂದು, ಪುರುಷರ ಶಾಟ್ ಪುಟ್ ಸ್ಪರ್ಧೆಯಲ್ಲಿ ತಜಿಂದರ್ಪಾಲ್ ಸಿಂಗ್ ತೂರ್ (Tajinderpal Singh Toor) ಬೆಳ್ಳಿ ಹಾಗೂ ಮಹಿಳೆಯರ 400 ಮೀಟರ್ ಓಟದ ಫೈನಲ್ನಲ್ಲಿ ಪ್ರಾಚಿ ಚೌಧರಿ (Prachi Choudhary) ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು 30ಕ್ಕೆ ಏರಿಸಿದ್ದಾರೆ.
ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ಗುರಿಯೊಂದಿಗೆ ತೂರ್ ಫೈನಲ್ಗೆ ಪ್ರವೇಶಿಸಿದ್ದರು. ಆದರೆ, ಇರಾನ್ನ ಮೊಹಮ್ಮದ್ರೆಜಾ ತಯೇಬಿಸೆ ಅವರು ಗೇಮ್ಸ್ ದಾಖಲೆಯನ್ನು ಮುರಿದಿದ್ದರಿಂದ ತೂರ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಮತ್ತೊಂದೆಡೆ, ರೋಚಕ ಓಟದಲ್ಲಿ ಪ್ರಾಚಿ ಮೂರನೇ ಸ್ಥಾನ ಪಡೆದರು. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಭಾರತೀಯ ಅಥ್ಲೀಟ್ ಕಿರಣ್ ಪಹಲ್ ಐದನೇ ಸ್ಥಾನ ಪಡೆಯುವ ಮೂಲಕ ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದರು. ಇದನ್ನೂ ಓದಿ: Asian Games 2026 | ಪುರುಷರ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನದ ಪದಕ – ಇರಾನ್ ವಿರುದ್ಧ 40-34 ಅಂತರದ ಜಯ
ಡೆಕಾಥ್ಲಾನ್ನ ಹೈ ಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಮೊದಲ ಸ್ಥಾನ ಪಡೆದಿದ್ದು, ಸದ್ಯದ ಸ್ಥಿತಿಯಲ್ಲಿ ಒಟ್ಟಾರೆ ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅನಿಮೇಶ್ ಕುಜುರ್ ಪುರುಷರ 200 ಮೀಟರ್ ಫೈನಲ್ಗೆ ಪ್ರವೇಶಿಸಿದರೆ, ಗುಲ್ವೀರ್ ಸಿಂಗ್ ಮತ್ತು ಯೂನಸ್ ಶಾ ಪುರುಷರ 1500 ಮೀಟರ್ ಫೈನಲ್ಗೆ ಅರ್ಹತೆ ಪಡೆದರು.
ವಿಶಾಲ್ ಟಿ.ಕೆ. ಅವರು ಪುರುಷರ 400 ಮೀಟರ್ ಫೈನಲ್ನಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ, ಪಾರುಲ್ ಚೌಧರಿ ಮತ್ತು ಪೂಜಾ ಅವರು ಮಹಿಳೆಯರ 1500 ಮೀಟರ್ ಫೈನಲ್ನಲ್ಲಿ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮುನ್ನ, ಏಷ್ಯನ್ ಗೇಮ್ಸ್ನಲ್ಲಿ ಮ್ಯಾರಥಾನ್ ಪದಕಕ್ಕಾಗಿ ಭಾರತದ 41 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ ಸಾವನ್ ಬರ್ವಾಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಇದನ್ನೂ ಓದಿ: Asian Games | ಕಬಡ್ಡಿಯಲ್ಲಿ ಚಿನ್ನದ ಗರಿ – ಭಾರತೀಯ ವನಿತೆಯರ ಚಿನ್ನದ ಬೇಟೆ

