ಶಿವಮೊಗ್ಗ: ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ದುರ್ಘಟನೆಯ ಹಿನ್ನೆಲೆ ತಾತ್ಕಾಲಿಕವಾಗಿ ಬಂದ್ ಆಗಿದ್ದ ಶಿವಮೊಗ್ಗದ (Shivamogga) ಸಕ್ರೆಬೈಲು ಆನೆ ಬಿಡಾರ (Sakrebyle Elephant Camp) ಕೊನೆಗೂ ಪ್ರವಾಸಿಗರ (Tourists) ಪ್ರವೇಶಕ್ಕೆ ಮುಕ್ತವಾಗಿದೆ.
ಇಂದಿನಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವಾಸಿಗರ ಪ್ರವೇಶ ಪುನರಾರಂಭವಾಗಿದೆ. ವೀಕ್ಷಣೆಗೆ ಅವಕಾಶ ನೀಡಿದ ಮೊದಲ ದಿನವೇ 400ಕ್ಕೂ ಹೆಚ್ಚು ಪ್ರವಾಸಿಗರು ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳು ಪ್ರವಾಸಿಗರ ಸುರಕ್ಷತೆಗೆ ಮಾರ್ಗಸೂಚಿ ಪಾಲನೆ ಮಾಡಿದ್ದಾರೆ. ಪ್ರವಾಸಿಗರ ವೀಕ್ಷಣಾ ಪ್ರದೇಶದಲ್ಲಿ ಪ್ರತಿನಿತ್ಯ 8 ರಿಂದ 10 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆನೆಗಳ ಮೈ ತೊಳೆಯುವ ಪ್ರದೇಶಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಹೊಸ ಮಾರ್ಗಸೂಚಿಯಂತೆ ಆನೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ದೂರದಿಂದ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮಾಫಿ ಸಾಕ್ಷಿ ತಡೆಯಲು ದರ್ಶನ್ ಕಸರತ್ತು – ಹೇಳಿಕೆ ದಾಖಲು ಮುಂದೂಡಿಕೆಗೆ ಅರ್ಜಿ
ಕಳೆದ ಏಪ್ರಿಲ್ 18ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಘಟನೆ ಬಳಿಕ ಪ್ರವಾಸಿಗರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಅರಣ್ಯ ಸಚಿವರು ಸೂಚಿಸಿದ್ದರು. ಇದೀಗ ಹಲವು ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮೂಲಕ ಸಕ್ರೆಬೈಲು ಆನೆ ಬಿಡಾರವನ್ನ ಪುನರಾರಂಭಿಸಲಾಗಿದೆ. ಶಿಬಿರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಆನೆಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಎರಡು ಗುಂಪುಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿದೆ. ಇದನ್ನೂ ಓದಿ: ಮುರುಡೇಶ್ವರದ ಮುಡಿಗಂಧ ಪ್ರಸಾದಕ್ಕೆ ಭರ್ಜರಿ ಬೆಲೆ – ಬರೋಬ್ಬರಿ 11.10 ಲಕ್ಷಕ್ಕೆ ಹರಾಜು!
ಮುಖ್ಯವಾಗಿ, ಸಾರ್ವಜನಿಕರು ಮತ್ತು ಆನೆಗಳ ನಡುವೆ ನೇರ ಸಂಪರ್ಕವಾಗದಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರವಾಸಿಗರು ಆನೆಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡಲು ಹಾಗೂ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿಬಿರದ ವಿವಿಧೆಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಶಿಬಿರಕ್ಕೆ ಭೇಟಿ ನೀಡುವವರು ಅರಣ್ಯ ಇಲಾಖೆ ಸೂಚಿಸಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಟಿಕೆಟ್ ಸಿಕ್ಕಿಲ್ಲ ಅಂತ ರೈಲು ಅಪಘಾತದ ಪರಿಹಾರ ನಿರಾಕರಿಸುವಂತಿಲ್ಲ; ಸುಪ್ರೀಂ ಕೋರ್ಟ್
ಸಕ್ರೆಬೈಲು ಆನೆ ಬಿಡಾರವು ಶಿವಮೊಗ್ಗದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಆನೆಗಳನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶಕ್ಕಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದೀಗ ಹಲವು ತಿಂಗಳ ಬಳಿಕ ಶಿಬಿರ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗುತ್ತಿರುವುದರಿಂದ ಪ್ರವಾಸಿಗರಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಎಸ್‌ಸಿ-ಎಸ್‌ಟಿ ಸಂಸದರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಿ – ಸ್ಪೀಕರ್ ಓಂ ಬಿರ್ಲಾಗೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಪತ್ರ

