– 50ನೇ ವರ್ಷದ ಗಣೇಶೋತ್ಸವ ಸಂಪನ್ನ
ಕಾರವಾರ: ಮುರುಡೇಶ್ವರ (Murudeshwara) ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ (Ganesha Festival) 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಫಲಾವಳಿ ಹರಾಜಿನಲ್ಲಿ ದೇವರ ಮುಡಿಗಂಧ ಪ್ರಸಾದವು 11.10 ಲಕ್ಷ ರೂ.ಗೆ ಹರಾಜಾಗಿದೆ. ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ ಅವರು ಈ ಪ್ರಸಾದವನ್ನ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.
ದೇವರಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ದೇವರ ಮುಡಿಗೆ ಅಲಂಕರಿಸುವ ಹೂವು, ತುಳಸಿ, ಶ್ರೀಗಂಧ, ಕುಂಕುಮ ಹಾಗೂ ನೈವೇದ್ಯದಂತಹ ವಸ್ತುಗಳನ್ನ ʻಮುಡಿಗಂಧʼ ಪ್ರಸಾದ (Mudigandha Prasada) ಎಂದು ಕರೆಯಲಾಗುತ್ತದೆ. ಭಕ್ತರು ಇದನ್ನು ಅತ್ಯಂತ ಪವಿತ್ರವಾದ ಪ್ರಸಾದ ಹಾಗೂ ದೇವರ ನೇರ ಆಶೀರ್ವಾದದ ಪ್ರತೀಕವೆಂದು ನಂಬುತ್ತಾರೆ.
ಮುರುಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ 50ನೇ ವರ್ಷದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14 ರಿಂದ 24ರ ವರೆಗೆ 11 ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಸುಮಾರು 1 ಕೋಟಿ ವೆಚ್ಚದಲ್ಲಿ ಆಯೋಜಿಸಲಾಗಿದ್ದ ಉತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಿದವು.
ಉತ್ಸವದ ಕೊನೆಯ ದಿನವಾದ ಗುರುವಾರ ಸಂಜೆ ಒಲಗ ಮಂಟಪದ ಗಣೇಶನನ್ನ ಮುರುಡೇಶ್ವರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಫಲಾವಳಿ ಹರಾಜು ಪ್ರಕ್ರಿಯೆಯಲ್ಲಿ ದೇವರ ಮುಡಿಗಂಧ ಪ್ರಸಾದವನ್ನು 11.10 ಲಕ್ಷಕ್ಕೆ ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ ಅವರು ಪಡೆದುಕೊಂಡರು.
ಈ ಹರಾಜು ಮೊತ್ತವು ಮುರುಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ಮುಡಿಗಂಧ ಪ್ರಸಾದ ಹರಾಜು ಎಂಬ ದಾಖಲೆಗೆ ಪಾತ್ರವಾಗಿದೆ. ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮುಡಿಗಂಧ ಪ್ರಸಾದಕ್ಕೆ ನಡೆದ ಗಮನಾರ್ಹ ಹಾಗೂ ಅತ್ಯಧಿಕ ಮೊತ್ತದ ಹರಾಜುಗಳಲ್ಲಿ ಒಂದಾಗಿದೆ.

