– ಮೃತ ಪ್ರಯಾಣಿಕನ ಕುಟುಂಬಕ್ಕೆ 8 ಲಕ್ಷ ಪರಿಹಾರ ನೀಡುವಂತೆ ಆದೇಶ
ನವದೆಹಲಿ: ರೈಲು ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕನ ಬಳಿ ಟಿಕೆಟ್ ಪತ್ತೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಅವರ ಕುಟುಂಬಕ್ಕೆ ಪರಿಹಾರ ನಿರಾಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.
2017ರಲ್ಲಿ ಗುಜರಾತ್ನಲ್ಲಿ ನಡೆದ ರೈಲು ಅಪಘಾತಕ್ಕೆ (Train Accident) ಸಂಬಂಧಿಸಿದ ಪ್ರಕರಣದಲ್ಲಿ ಮೃತ ಮಹೇಶ್ಭಾಯಿ ಅವರ ತಂದೆ-ತಾಯಿಗೆ ನೀಡಲಾಗಿದ್ದ 8 ಲಕ್ಷ ಪರಿಹಾರವನ್ನ ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ. ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಹಾಗೂ ಎ.ಎಸ್. ಚಂದೂರ್ಕರ್ ಅವರ ಪೀಠವು ಗುಜರಾತ್ ಹೈಕೋರ್ಟ್ನ ತೀರ್ಪನ್ನು ರದ್ದುಗೊಳಿಸಿದೆ.
ಮಹೇಶ್ಭಾಯಿ ಅವರು 2017ರ ಸೆಪ್ಟೆಂಬರ್ 27ರಂದು ಅಹಮದಾಬಾದ್ನಿಂದ ಸೂರತ್ಗೆ ತೆರಳುತ್ತಿದ್ದ ವೇಳೆ ಚಲಿಸುತ್ತಿದ್ದ ರೈಲಿನ ಸಾಮಾನ್ಯ ಬೋಗಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಅಕ್ಟೋಬರ್ 31 ರಂದು ಮೃತಪಟ್ಟಿದ್ದರು.

ಟಿಕೆಟ್ ಪತ್ತೆಯಾಗದಿರುವುದೇ ನಿರಾಕರಣೆಗೆ ಆಧಾರವಲ್ಲ
ಮೃತರ ತಂದೆ ಶಪಥಪೂರ್ವಕವಾಗಿ ತಮ್ಮ ಪುತ್ರ ರೈಲು ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದ ಎಂದು ಹೇಳಿಕೆ ನೀಡಿದ್ದರು. ಆದರೆ ಟಿಕೆಟ್, ರುಮಾಲು, ಕೈಗಡಿಯಾರ, ಬಾಚಣಿಗೆ ಹಾಗೂ 800– 900 ರೂ. ನಗದು ಸೇರಿದಂತೆ ವೈಯಕ್ತಿಕ ವಸ್ತುಗಳು ಕಾಣೆಯಾಗಿದ್ದವು ಎಂದು ಕುಟುಂಬ ತಿಳಿಸಿತ್ತು.
ಮೃತರು ದೀರ್ಘಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರ ವಸ್ತುಗಳನ್ನ ಕುಟುಂಬದವರು ಸುರಕ್ಷಿತವಾಗಿ ಉಳಿಸಿಕೊಂಡಿರುವುದು ಸಹಜವಾಗಿರಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಟಿಕೆಟ್ ಪತ್ತೆಯಾಗಿಲ್ಲ ಎಂಬ ಕಾರಣವೊಂದನ್ನೇ ಆಧರಿಸಿ ಮೃತರು ನಿಜವಾದ ಪ್ರಯಾಣಿಕರಾಗಿರಲಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
8 ಲಕ್ಷ ರೂ. ಪರಿಹಾರ ನೀಡಲು 1 ತಿಂಗಳ ಗಡುವು
2022ರ ಜೂನ್ 17ರಂದು ರೈಲ್ವೆ ಕ್ಲೇಮ್ಸ್ ಟ್ರಿಬ್ಯುನಲ್ ಮಹೇಶ್ಭಾಯಿ ಅವರು ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದು, ಇದು ‘ಅವಾಂಛಿತ ಘಟನೆ’ ಎಂದು ಪರಿಗಣಿಸಿ ಅವರ ತಂದೆ-ತಾಯಿಗೆ 8 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಪರಿಹಾರ ಮೊತ್ತಕ್ಕೆ ಘಟನೆ ನಡೆದ ದಿನದಿಂದ ಆದೇಶದವರೆಗೆ ಶೇ.9 ರಷ್ಟು ವಾರ್ಷಿಕ ಬಡ್ಡಿಯನ್ನೂ ನಿಗದಿಪಡಿಸಲಾಗಿತ್ತು. ನಂತರ ಗುಜರಾತ್ ಹೈಕೋರ್ಟ್ ಈ ಪರಿಹಾರ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಟುಂಬ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಟ್ರಿಬ್ಯುನಲ್ನ ಆದೇಶವನ್ನ ಮರುಸ್ಥಾಪಿಸಿ, 8 ಲಕ್ಷ ಪರಿಹಾರವನ್ನ ಮೃತರ ತಂದೆ-ತಾಯಿಗೆ 30 ದಿನಗಳೊಳಗೆ ಪಾವತಿಸುವಂತೆ ರೈಲ್ವೆಗೆ ನಿರ್ದೇಶಿಸಿದೆ.
ರೈಲ್ವೆ ತನಿಖೆಯ ವಿಳಂಬಕ್ಕೂ ಆಕ್ಷೇಪ
ಅಪಘಾತದ ಸುಮಾರು 7 ತಿಂಗಳ ಬಳಿಕ, 2018ರ ಮೇ 17ರಂದು ರೈಲ್ವೆ ತನಿಖಾ ವರದಿ ಸಿದ್ಧಪಡಿಸಲಾಗಿತ್ತು. ತನಿಖೆ ನಡೆಸುವಲ್ಲಿ ಉಂಟಾದ ವಿಳಂಬಕ್ಕೆ ದಾವೆದಾರರನ್ನ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರೈಲ್ವೆಯೇ ತನಿಖೆ ನಡೆಸುವಲ್ಲಿ ತೋರಿದ ವಿಳಂಬದ ಲಾಭವನ್ನ ಪಡೆದು ಕುಟುಂಬಕ್ಕೆ ಪರಿಹಾರ ನಿರಾಕರಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

