– ಭೂ ಕಂದಾಯ ಪಾವತಿ ವಿನಾಯಿತಿ, ಕೃಷಿ ಸಂಬಂಧಿತ ಸಾಲಗಳ ವಸೂಲಾತಿಗೆ ತಡೆ
– ಕೃಷಿ ಪಂಪ್‌ಗಳ ಬಾಕಿ ವಿದ್ಯುತ್ ಬಿಲ್ ರಿಯಾಯಿತಿ; ಬರ ಎದುರಿಸಲು ಹಲವು ಕ್ರಮ
ಮುಂಬೈ: ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ (Maharashtra Govt) ಇಂದು (ಶನಿವಾರ) ಮಹತ್ವದ ನಿರ್ಧಾರ ಪ್ರಕಟಿಸಿದೆ. ರಾಜ್ಯದ 265 ತಾಲ್ಲೂಕುಗಳನ್ನು ಬರಪೀಡಿತ (Drought Affected) ಎಂದು ಘೋಷಿಸಿದೆ.
ಮಹಾರಾಷ್ಟ್ರದ ಒಟ್ಟು 358 ತಾಲ್ಲೂಕುಗಳ ಪೈಕಿ 265 ತಾಲ್ಲೂಕುಗಳನ್ನು ಬರಪೀಡಿತ ಅಂತ ಸರ್ಕಾರ ಘೋಷಿಸಿದೆ. ಈ ಘೋಷಣೆಯು ರಾಜ್ಯದ ಶೇ.74ರಷ್ಟು ಪ್ರದೇಶವನ್ನು ಒಳಗೊಂಡಿದೆ. ಇತ್ತೀಚೆಗೆ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು, ಈ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೇ ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನ ಎದುರಿಸಲು ಸಿಎಂ ಫಡ್ನವಿಸ್ ಹಲವು ಕ್ರಮಗಳನ್ನ ಘೋಷಿಸಿದ್ದಾರೆ.
ಪರ ಪರಿಸ್ಥಿತಿ ಎದುರಿಸಲು ಏನೇನು ಕ್ರಮ?
• ಭೂ ಕಂದಾಯ ಪಾವತಿಯಿಂದ ವಿನಾಯಿತಿ.
• ಬೆಳೆ ಸಾಲಗಳ ಪುನಾರಚನೆ.
• ಕೃಷಿ ಸಂಬಂಧಿತ ಸಾಲಗಳ ವಸೂಲಾತಿಗೆ ತಡೆ.
• ಕೃಷಿ ಪಂಪ್‌ಗಳ ಬಾಕಿ ವಿದ್ಯುತ್ ಬಿಲ್‌ಗಳಲ್ಲಿ ರಿಯಾಯಿತಿ.
• 7.5 ಅಶ್ವಶಕ್ತಿ ಸಾಮರ್ಥ್ಯದ ವಿದ್ಯುತ್ ಪಂಪ್‌ಗಳಿಗೆ ಈಗಾಗಲೇ ವಿದ್ಯುತ್ ಬಿಲ್ ವಿನಾಯಿತಿ ಇದೆ. ಇನ್ನು ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪಂಪ್‌ಗಳಿಗೂ ವಿನಾಯಿತಿ ನೀಡಲಾಗುವುದು.
• ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ ರಿಯಾಯಿತಿ.
• ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳನ್ನ ಸಡಿಲಗೊಳಿಸಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ.
• ಅಗತ್ಯವಿರುವ ಪ್ರದೇಶಗಳಿಗೆ ಕುಡಿಯುವ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ.
• ಬರಪೀಡಿತ ಗ್ರಾಮಗಳ ರೈತರ ಕೃಷಿ ಪಂಪ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ.
• ಧಾನ್ಯ ಬೆಳೆಗಳ ಮೇಲೆ ಅವಲಂಬಿತವಾಗಿರುವ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪಶು ಮೇವು ಒದಗಿಸಲಾಗುವುದು.
• ದೊಡ್ಡ ಪ್ರಮಾಣದಲ್ಲಿ ನೀರು ಸಂರಕ್ಷಣಾ ಕಾಮಗಾರಿಗಳನ್ನ ಕೈಗೊಳ್ಳಲಾಗುವುದು.
• ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ನೀರಿನ ವ್ಯವಸ್ಥೆಯನ್ನ ಹಿಂದಿನ ಆದೇಶದಂತೆ ಮುಂದುವರಿಸಲಾಗುವುದು.
• ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪಂಚನಾಮೆ ಪ್ರಕ್ರಿಯೆ ತಕ್ಷಣ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
• ಬೆಳೆಗಳ ಪರಿಸ್ಥಿತಿ ತೋರಿಸುವ ಛಾಯಾಚಿತ್ರಗಳು ಹಾಗೂ GPS ಮಾಹಿತಿ ಸಂಗ್ರಹಿಸುವಂತೆ ಆದೇಶಿಸಲಾಗಿದೆ.

