– ಮೋದಿ, ಅಮಿತ್ ಶಾ ಗೌಪ್ಯವಾಗಿ ಚುನಾವಣಾ ಆಯೋಗಕ್ಕೆ ಸೂಚನೆ ಕೊಡ್ತಿದ್ದಾರೆ
– ಬಿಜೆಪಿ ಬಂದ್ಮೇಲೆ 2015 ರಿಂದಲೂ ಚುನಾವಣೆ ಆಯೋಗ ಅಕ್ರಮ ಮಾಡ್ತಿದೆ
ಬೆಂಗಳೂರು: ಝೆನ್-ಜಿ ಮತದಾರರ ಹಕ್ಕು ಕಸಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ (BK Hariprasad) ಆರೋಪಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ (Congress Protest) ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನ ಕೈಬಿಡಲಾಗುತ್ತಿದೆ ಎಂದು ಆರೋಪಿಸಿದರು.
2015 ರಿಂದ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚುನಾವಣಾ ಆಯೋಗ (Election Commission) ಅಕ್ರಮ ಮಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು 1.50 ಕೋಟಿ ಮತದಾರರನ್ನ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೆ, 65 ಲಕ್ಷ ಮತಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ಕಿಡಿ ಕಾರಿದರು.

ರಾಹುಲ್ ಗಾಂಧಿ ಮೊದಲೇ ಎಚ್ಚರಿಸಿದ್ದರು
ಪ್ರಜಾಪ್ರಭುತ್ವದ ಬುನಾದಿಯೇ ಮತದಾನ. ಅರ್ಹ ಮತದಾರರೊಬ್ಬರ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಮತದಾರರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ಉದ್ದೇಶದಿಂದಲೇ ರಾಜೀವ್ ಗಾಂಧಿ ಕಾಲದಲ್ಲಿ 18 ವರ್ಷಕ್ಕೆ ಮತದಾನದ ಹಕ್ಕು ನೀಡಲಾಯಿತು. ರಾಹುಲ್ ಗಾಂಧಿ ಅವರು 2024ರ ನಂತರ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದಾರೆ. ಮಹದೇವಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಏನಾಗಿದೆ ಎಂಬುದನ್ನು ಅವರು ದೇಶದ ಗಮನಕ್ಕೆ ತಂದಿದ್ದರು. ಆದ್ರೆ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಈಗಲಾದರೂ ಜನ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಮೋದಿ, ಶಾ ರಿಂದ ಗೌಪ್ಯ ಸೂಚನೆ
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹರಿಪ್ರಸಾದ್, ಆಯೋಗದಲ್ಲಿ ಆಯುಕ್ತರ ನಡುವೆ ಭಿನ್ನಮತವಿದೆ. 14 ವಿಚಾರಗಳಿಗೆ ಇಬ್ಬರು ಚುನಾವಣಾ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದರೂ, ಅದನ್ನು ಪರಿಗಣಿಸಲಾಗಿಲ್ಲ. ಮೋದಿ ಹಾಗೂ ಅಮಿತ್ ಶಾ ಅವರು ಗೌಪ್ಯವಾಗಿ ಚುನಾವಣಾ ಆಯೋಗಕ್ಕೆ ಸೂಚನೆ ನೀಡುತ್ತಿದ್ದಾರೆ. ದೇಶಾದ್ಯಂತ ಸುಮಾರು 13 ಕೋಟಿ ಮತಗಳನ್ನ ಡಿಲೀಟ್ ಮಾಡಲಾಗಿದೆ. ಕರ್ನಾಟಕದಲ್ಲೂ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

4 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಅಕ್ರಮ
ಬಿಹಾರದಲ್ಲಿ 64 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರ ಪೈಕಿ 38 ಲಕ್ಷ ಮತದಾರರಿಗೆ ನೋಟಿಸ್ ಕೊಟ್ಟು ಹಾಗೇ ಇಟ್ಟಿದ್ದಾರೆ, ಈಮೂಲಕ ಅವರ ಮತದಾನದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ತಮಿಳುನಾಡು, ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆಯಲ್ಲೂ ಮತದಾರರ ಹಕ್ಕಿನ ವಿಚಾರದಲ್ಲಿ ಅಕ್ರಮಗಳು ನಡೆದಿವೆ. 4 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ, ಅಂದಿನ ಚುನಾವಣಾ ಆಯುಕ್ತರನ್ನ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳನ್ನಾಗಿ ಮಾಡಲಾಗಿದೆ ಎಂದು ಕಿಡಿಕಾರಿದರು.
ಅಲ್ಪ ಸಂಖ್ಯಾತರು, ದಲಿತರ ಮತ ಅಳಿಸುವ ಹುನ್ನಾರ
ಕರ್ನಾಟಕದಲ್ಲಿ 41 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಬೆಳಗಾವಿ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನ ಡಿಲೀಟ್ ಮಾಡುವಂತೆ ಪತ್ರ ಬರೆಯಲಾಗುತ್ತಿದೆ. ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳನ್ನು ಡಿಲೀಟ್ ಮಾಡುವ ಹುನ್ನಾರವೂ ನಡೆಯುತ್ತಿದೆ ಎಂದ ಅವರು, ಮತದಾರರ ಹಕ್ಕು ಕಸಿಯಬಾರದು. ಅರ್ಹ ಮತದಾರರ ಪಟ್ಟಿಯಿಂದ ಯಾರನ್ನೂ ಕೈಬಿಡಬಾರದು. ಸಂವಿಧಾನವನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸರ ವಿರುದ್ಧವೂ ಆಕ್ರೋಶ
ಪ್ರತಿಭಟನೆ ವೇಳೆ ಮಾತನಾಡಿದ ಹರಿಪ್ರಸಾದ್, ಸಾಂವಿಧಾನಿಕ ಹುದ್ದೆಯಲ್ಲಿರುವ ಚುನಾವಣಾ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಬೂತದಹನ ಮಾಡಲು ತಂದಿದ್ದ ವಸ್ತುವನ್ನ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಪೊಲೀಸರು ವಾಪಸ್ ನೀಡಬೇಕು. ಇಲ್ಲವಾದರೆ ಪೊಲೀಸರ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

