ಆನೇಕಲ್: ತಾಯಿಯ ಸಾವಿನ ನೋವಿನ ನಡುವೆಯೂ ಇಬ್ಬರು ಪುಟ್ಟ ಮಕ್ಕಳು ಹಾಗೂ ಪತಿ ಕೈಗೊಂಡ ಮಹತ್ವದ ನಿರ್ಧಾರ ಹಲವರ ಬದುಕಿಗೆ ಹೊಸ ಆಶಾಕಿರಣವಾಗಿದೆ. ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗಾಂಗ ದಾನ (Organ Donation) ಮಾಡುವ ಮೂಲಕ ಕುಟುಂಬ ಸಾರ್ಥಕತೆ ಮೆರೆದಿದೆ.
ಜಿಗಣಿ (Jigani) ಸಮೀಪದ ಹಾರಗದ್ದೆಯ ದ್ಯಾವಸಂದ್ರ ಗ್ರಾಮದ ನಿವಾಸಿ ಕುಸುಮಾ (39) ಅಂಗಾಂಗ ದಾನ ಮಾಡಿದ ಮಹಿಳೆ. ಖಾಸಗಿ ಕಂಪನಿಯೊಂದನ್ನ ನಡೆಸುತ್ತಿದ್ದ ಕುಸುಮಾ ಅವರ ಪತಿ ಜಯಶಂಕರ್. ದಂಪತಿಗೆ ಓರ್ವ ಹೆಣ್ಣು ಹಾಗೂ ಓರ್ವ ಗಂಡು ಮಗ ಇದ್ದಾರೆ.

ಕುಟುಂಬದೊಂದಿಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದ ವೇಳೆ ಕುಸುಮಾ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ, ಹೃದಯಾಘಾತವಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕುಸುಮಾ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದರು.
ಈ ವೇಳೆ ಪತಿ ಜಯಶಂಕರ್ ಹಾಗೂ ಇಬ್ಬರು ಮಕ್ಕಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸಾವಿನ ಬಳಿಕವೂ ಹಲವು ಜೀವಗಳಿಗೆ ಬೆಳಕಾಗಲಿ ಎಂಬ ಉದ್ದೇಶದಿಂದ ಕುಸುಮಾ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ. ಕುಸುಮಾ ಅವರ ಕಣ್ಣು, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಕಿಡ್ನಿಗಳನ್ನು ದಾನ ಮಾಡಲಾಗಿದೆ. ಈ ಅಂಗಾಂಗ ದಾನದಿಂದ 7ರಿಂದ 8 ಜನರ ಜೀವಕ್ಕೆ ನೆರವಾಗಲಿದೆ.

ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ಪತಿ ಹಾಗೂ ಮಕ್ಕಳು ಕೈಗೊಂಡ ಈ ನಿರ್ಧಾರ ಅನೇಕರಿಗೆ ಪ್ರೇರಣೆಯಾಗಿದೆ. ಕುಸುಮಾ ಅವರ ಅಂಗಾಂಗ ದಾನ ಹಲವರ ಬಾಳಿಗೆ ಬೆಳಕಾಗಿದೆ.

