ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿಯ (CJP) ಪ್ರಮುಖ ನಾಯಕರಾದ ಸೌರವ್ ದಾಸ್(Saurav Das), ಅಭಿಜಿತ್ ದಿಪ್ಕೆ(Abhijeet Dipke), ಅಶುತೋಷ್ ರಾಂಕಾ(Ashutosh Ranka) ಮತ್ತು ರತ್ನ ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar Protest) ನಡೆದ ಪ್ರತಿಭಟನೆಯ ವೇಳೆ ತನ್ನ ಫೋಟೋವನ್ನು ದುರುದ್ದೇಶಪೂರ್ವಕವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಸಿತು.
ಈ ವೇಳೆ ಸಂತ್ರಸ್ತ ಮಹಿಳೆಗೆ ಸಂಬಂಧಿಸಿದ ಎಲ್ಲಾ ಆಕ್ಷೇಪಾರ್ಹ ಚಿತ್ರಗಳು ಮತ್ತು ಲಿಂಕ್ಗಳನ್ನು 24 ಗಂಟೆಗಳ ಒಳಗೆ ತನ್ನ ಎಲ್ಲಾ ವೇದಿಕೆಗಳಿಂದ ತೆಗೆದುಹಾಕುವಂತೆ ಮೆಟಾ (Meta) ಕಂಪನಿಗೆ ಹೈಕೋರ್ಟ್ ಆದೇಶ ನೀಡಿದೆ.
ಅಷ್ಟೇ ಅಲ್ಲದೆ ಸಂತ್ರಸ್ತ ಮಹಿಳೆಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಸೂಚಿಸಿರುವ ನ್ಯಾಯಾಲಯವು ಈ ಕುರಿತು ದೆಹಲಿ ಪೊಲೀಸರಿಗೂ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ತನಿಖೆಯ ಸ್ಥಿತಿಗತಿ ವರದಿ (Status Report) ಸಲ್ಲಿಸುವಂತೆ ಆದೇಶಿಸಿದೆ.
ವಿಚಾರಣೆ ವೇಳೆ ತೀವ್ರ ಕಳವಳ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಗಿರೀಶ್ ಕತ್ಪಾಲಿಯಾ ಅವರು, “ಇದು ಅತ್ಯಂತ ಅಸಾಮಾನ್ಯವಾದ ಪ್ರಕರಣ. ಈ ವಿಷಯವು ಕೇವಲ ಒಬ್ಬ ಮಹಿಳೆಗೆ ಮಾತ್ರ ಸೀಮಿತವಾಗಿಲ್ಲ, ಇದು ದೇಶದ ಪ್ರಧಾನಮಂತ್ರಿಯವರಿಗೂ ಸಂಬಂಧಿಸಿದ ಗಂಭೀರ ವಿಚಾರವಾಗಿದೆ. ಈ ವಿಷಯದಲ್ಲಿ ಅವರು ಸಂವೇದನಾಶೀಲರಾಗಿರದಿದ್ದರೆ, ಅವರನ್ನು ಸಂವೇದನಾಶೀಲರನ್ನಾಗಿ ಮಾಡುವುದು ನನಗೆ ತಿಳಿದಿದೆ”ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸರ್ಕಾರದಿಂದ ಮಕ್ಕಳಿಗೆ ಕಳಪೆ ಶೂಭಾಗ್ಯ – ವಿತರಣೆಗೂ ಮುನ್ನವೇ ಕಿತ್ತುಹೋದ ಶೂ, ಸಾಕ್ಸ್

ಏನಿದು ಪ್ರಕರಣ?
ಜಂತರ್ ಮಂತರ್ನಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಫೇಸ್-ಸ್ವಾಪ್ (Face-swap) ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತನ್ನ ಮುಖವನ್ನು ಮಾರ್ಫ್ ಮಾಡಲಾಗಿದೆ ಎಂದು ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.
ಈ ಮಾರ್ಫ್ ಮಾಡಿದ ಚಿತ್ರವನ್ನು ಪ್ರತಿಭಟನಾ ಸ್ಥಳದಲ್ಲಿ ಬೃಹತ್ ಬ್ಯಾನರ್ಗಳು ಮತ್ತು ಪೋಸ್ಟರ್ಗಳಲ್ಲಿ ಬಳಸಿ, ಅಸಭ್ಯ ಘೋಷಣೆಗಳನ್ನು ಕೂಗಲಾಗಿತ್ತು. ಅಲ್ಲದೆ, ಈ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು ಎಂದು ಸಂತ್ರಸ್ತೆ ಆರೋಪಿಸಿದ್ದರು.
ಮಹಿಳೆಯು ಸಿಜೆಪಿ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಮತ್ತಿತರರ ವಿರುದ್ಧ ನಿರ್ದಿಷ್ಟವಾಗಿ ದೂರು ನೀಡಿದ್ದರೂ ದೆಹಲಿ ಪೊಲೀಸರು ‘ಅಪರಿಚಿತ ವ್ಯಕ್ತಿಗಳ’ ವಿರುದ್ಧವಷ್ಟೇ ಎಫ್ಐಆರ್ ದಾಖಲಿಸಿಕೊಂಡಿದ್ದರು. ಎಫ್ಐಆರ್ನಲ್ಲಿ ನಾಯಕರ ಹೆಸರುಗಳನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಹೆಸರು ಸೇರಿಸದ್ದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.

