ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ಅವರ ಉತ್ತರ ಪ್ರದೇಶ ಪ್ರವಾಸ ಹಾಗೂ ಯುವಜನ ಸಂವಾದ ಕಾರ್ಯಕ್ರಮಗಳನ್ನು ಮುಂದೂಡಿಕೆಯಾಗಿದೆ.
ಪೂರ್ವನಿಗದಿತ ವೇಳಾಪಟ್ಟಿಯಂತೆ ಜ್ಞಾನೇಶ್ ಕುಮಾರ್ ಅವರು ಶುಕ್ರವಾರ ಮೀರತ್‌ನಲ್ಲಿ ಹಾಗೂ ಸೆಪ್ಟೆಂಬರ್ 28 ರಂದು ವಾರಣಾಸಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು.
ಆಯೋಗದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಸ್ಪಷ್ಟನೆ ನೀಡಿದೆ. ಕೇವಲ ಆಡಳಿತಾತ್ಮಕ ಮತ್ತು ಲಾಜಿಸ್ಟಿಕ್ ವ್ಯವಸ್ಥಾಪನಾ ಕಾರಣಗಳಿಂದಾಗಿ ಈ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ ಎಂದು ಆಯೋಗ ತಿಳಿಸಿದೆ.
ಕಾರ್ಯಕ್ರಮಗಳ ದಿನಾಂಕ ಬದಲಾವಣೆ ಕುರಿತು ವಿವರಣೆ ನೀಡಿರುವ ಆಯೋಗದ ಅಧಿಕಾರಿಗಳು, “ಸ್ಥಳದ ಲಭ್ಯತೆ, ಉನ್ನತ ಅಧಿಕಾರಿಗಳ ವೇಳಾಪಟ್ಟಿ ಹಾಗೂ ನೈಸರ್ಗಿಕ ಅಂಶಗಳಂತಹ ನಾನಾ ಕಾರಣಗಳಿಂದ ದಿನಾಂಕಗಳಲ್ಲಿ ಬದಲಾವಣೆ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಈ ಹಿಂದೆಯೂ ಹಿಮಾಚಲ ಪ್ರದೇಶ, ಲಡಾಖ್ ಮತ್ತು ಉತ್ತರಾಖಂಡಗಳಲ್ಲಿ ಮತದಾರರ ಸಾಕ್ಷರತಾ ಸಮಾವೇಶಗಳ ದಿನಾಂಕಗಳನ್ನು ಮುಂದೂಡಲಾಗಿತ್ತು. ಅಷ್ಟೇ ಅಲ್ಲದೆ, ಉತ್ತರ ಪ್ರದೇಶದ ಈ ಎರಡು ಕಾರ್ಯಕ್ರಮಗಳನ್ನು ಮುಂದೂಡುವ ತೀರ್ಮಾನವನ್ನು ಸೆಪ್ಟೆಂಬರ್ 21 ರಂದೇ ತೆಗೆದುಕೊಳ್ಳಲಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: PUBLiC TV Explainer| SIR ಭಾರೀ ವಿವಾದ – ಒಂದು ಸಣ್ಣ ಬದಲಾವಣೆ ಇಷ್ಟೊಂದು ಚರ್ಚೆಯಾಗುತ್ತಿರೋದು ಯಾಕೆ?
ಕಳೆದ 10 ತಿಂಗಳ ಅವಧಿಯಲ್ಲಿ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಆದೇಶ ಹಾಗೂ ನಿರ್ಧಾರಗಳ ವಿರುದ್ಧ ಕನಿಷ್ಠ 14 ಬಾರಿ ಅಧಿಕೃತ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದ ನಂತರ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ.
ಈ ವಿದ್ಯಮಾನಗಳ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ದೇಶಾದ್ಯಂತ ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ.

