ನಾವು ಸೋಪ್, ಶಾಂಪೂ, ಟೂತ್ಪೇಸ್ಟ್ ಸೇರಿದಂತೆ ಹಲವು (ಟಾಯ್ಲೆಟರಿಗಳು) ವೈಯಕ್ತಿಕ ದಿನಬಳಕೆ ವಸ್ತುಗಳನ್ನು ಪ್ರತಿದಿನ ಬಳಸುತ್ತೇವೆ. ಆದರೆ, ಇವುಗಳಲ್ಲಿರುವ ಪದಾರ್ಥಗಳು ಸಸ್ಯಹಾರಿ (ವೆಜಿಟೇರಿಯನ್) ಮೂಲದ್ದೋ ಅಥವಾ ನಾನ್ವೆಜಿಟೇರಿಯನ್ (ಮಾಂಸಾಹಾರಿ/ಪ್ರಾಣಿಜನ್ಯ) ಮೂಲದ್ದೋ ಅನ್ನೋದನ್ನು ಗಮನಿಸಿದ್ದೀರಾ?
ಆಹಾರ ಪದಾರ್ಥಗಳ ಮೇಲೆ ವೆಜ್–ನಾನ್ವೆಜ್ ಗುರುತು ಇರುವುದನ್ನು ಬಹುತೇಕ ಎಲ್ಲರೂ ನೋಡಿರುತ್ತೇವೆ. ಆದರೆ, ಇಂತಹ ಗುರುತುಗಳು ಕೆಲವು ಕಾಸ್ಮೆಟಿಕ್ಸ್ ಮತ್ತು ಟಾಯ್ಲೆಟರಿ ಪ್ರೊಡಕ್ಟ್ಗಳಿಗೂ ಸಂಬಂಧಿಸಿವೆ.
ಟಾಯ್ಲೆಟರಿ ಪ್ರೊಡಕ್ಟ್ಗಳಲ್ಲಿ ಬಳಸುವ ವೆಜ್–ನಾನ್ವೆಜ್ ಪದಾರ್ಥಗಳೆನು?
ಸೋಪ್, ಶಾಂಪೂ, ಟೂತ್ಪೇಸ್ಟ್ ಮತ್ತು ಇತರ ಕಾಸ್ಮೆಟಿಕ್ಸ್ ತಯಾರಿಕೆಯಲ್ಲಿ ಹಲವು ರೀತಿಯ ಪದಾರ್ಥಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಕೆಲವು ಸಸ್ಯ ಮೂಲದ್ದಾಗಿರಬಹುದು. ಇನ್ನು ಕೆಲವು ಪ್ರಾಣಿಜನ್ಯ ಮೂಲದಿಂದ ಬಂದಿರಬಹುದು.
ಉದಾಹರಣೆಗೆ ಕೆಲವು ಪ್ರೊಡಕ್ಟ್ಗಳಲ್ಲಿ ಬೀಸ್ವ್ಯಾಕ್ಸ್, ಲ್ಯಾನೋಲಿನ್, ಜೆಲಟಿನ್ ಅಥವಾ ಇತರ ಪ್ರಾಣಿಜನ್ಯ ಮೂಲದ ಪದಾರ್ಥಗಳು ಬಳಸುವ ಸಾಧ್ಯತೆ ಇರುತ್ತದೆ.

ಬೀಸ್ವ್ಯಾಕ್ಸ್ – ಜೇನುಗೂಡನ್ನು ನಿರ್ಮಿಸಲು ನೈಸರ್ಗಿಕವಾಗಿ ಉತ್ಪಾದಿಸುವ ಮೇಣ
ಲ್ಯಾನೋಲಿನ್ – ಕುರಿಗಳ ಉಣ್ಣೆಯಿಂದ ಉತ್ಪತ್ತಿಯಾಗುವ ಒಂದು ರೀತಿಯ ಮೇಣ ಅಥವಾ ಕೊಬ್ಬು
ಜೆಲಟಿನ್ – ಪ್ರಾಣಿಗಳ ಕೊಲ್ಯಾಜೆನ್ (collagen) ಪ್ರೋಟೀನ್ನಿಂದ ತಯಾರಿಸಲ್ಪಡುವ ಬಣ್ಣಹೀನ, ವಾಸನೆ ಇಲ್ಲದ ಮತ್ತು ರುಚಿಯಿಲ್ಲದ ಪದಾರ್ಥವಾಗಿದೆ
ಒಂದು ನಿರ್ದಿಷ್ಟ ಪ್ರೊಡಕ್ಟ್ನಲ್ಲಿ ಯಾವ ಪದಾರ್ಥವಿದೆ ಅನ್ನೋದನ್ನು ಅದರ ಇಂಗ್ರಿಡಿಯಂಟ್ಸ್ ಲಿಸ್ಟ್ (ವಸ್ತುವಿನಲ್ಲಿ ಬಳಸಲಾದ ಅಂಶಗಳು) ನೋಡಿ ಮಾತ್ರ ಖಚಿತಪಡಿಸಿಕೊಳ್ಳಬೇಕು. ಕೇವಲ ಸೋಪ್ ಅಥವಾ ಶಾಂಪೂ ಅನ್ನೋ ಹೆಸರಿನಿಂದ ಅದು ವೆಜ್ ಅಥವಾ ನಾನ್ವೆಜ್ ಎಂದು ನಿರ್ಧರಿಸಲು ಸಾಧ್ಯವಿಲ್ಲ.
ಗ್ರೀನ್ ಅಥವಾ ಬ್ರೌನ್/ರೆಡ್ ಡಾಟ್ ಇದ್ದರೆ ಏನು ಅರ್ಥ?
ಕಾನೂನು ಮಾಪನಶಾಸ್ತ್ರ (Legal Metrology) ನಿಯಮಗಳಲ್ಲಿರುವ ನಿಬಂಧನೆಯ ಪ್ರಕಾರ, ಸೋಪ್, ಶಾಂಪೂ, ಟೂತ್ಪೇಸ್ಟ್ ಮತ್ತು ಇತರ ಕಾಸ್ಮೆಟಿಕ್ಸ್ ಹಾಗೂ ಟಾಯ್ಲೆಟರಿಗಳ ಪ್ಯಾಕೆಟ್ಗಳಲ್ಲಿ ವೆಜಿಟೇರಿಯನ್ ಮೂಲದ ಪ್ರೊಡಕ್ಟ್ಗೆ ಗ್ರೀನ್ ಡಾಟ್ ಹಾಗೂ ನಾನ್ವೆಜಿಟೇರಿಯನ್ ಮೂಲದ ಪ್ರೊಡಕ್ಟ್ಗೆ ರೆಡ್ ಅಥವಾ ಬ್ರೌನ್ ಡಾಟ್ ಎಂಬ ಗುರುತನ್ನು ಉಲ್ಲೇಖಿಸಲಾಗಿದೆ. ಈ ನಿಬಂಧನೆ 2014ರಲ್ಲಿ ಸೇರಿಸಲಾಯಿತು. ಹೀಗಾಗಿ ಪ್ಯಾಕೆಟ್ ಮೇಲೆ ಇಂತಹ ಗುರುತು ಕಂಡರೆ, ಅದರ ಅರ್ಥವನ್ನು ತಿಳಿದುಕೊಂಡು ಖರೀದಿ ಮಾಡಬಹುದು.
ಕಸ್ಟಮರ್ಗಳಿಗೆ ಇದರ ಪ್ರಯೋಜನ ಏನು?
ವೆಜಿಟೇರಿಯನ್ ಅಥವಾ ಪ್ರಾಣಿಜನ್ಯ ಪದಾರ್ಥಗಳನ್ನು ತಪ್ಪಿಸಲು ಬಯಸುವವರಿಗೆ ಇಂತಹ ಲೇಬಲಿಂಗ್ ಉಪಯುಕ್ತವಾಗಬಹುದು.
ಖರೀದಿಸುವಾಗ ಕೇವಲ ಪ್ರೊಡಕ್ಟ್ನ ಹೆಸರು ಅಥವಾ ಜಾಹೀರಾತನ್ನು ನೋಡದೆ, ಪ್ಯಾಕೆಟ್ ಮೇಲಿರುವ ಡಾಟ್, ಬಳಸಲಾದ ವಸ್ತುಗಳು ಮತ್ತು ಇತರ ಲೇಬಲ್ ಮಾಹಿತಿಯನ್ನು ಪರಿಶೀಲಿಸಲು ಇದು ಕಸ್ಟಮರ್ಗಳಿಗೆ ಸಹಾಯ ಮಾಡುತ್ತದೆ.

ವಿಶೇಷವಾಗಿ ವೈಯಕ್ತಿಕ ನಂಬಿಕೆ, ಆಹಾರ ಪದ್ಧತಿ ಅಥವಾ ಪ್ರಾಣಿಜನ್ಯ ಪದಾರ್ಥಗಳನ್ನು ತಪ್ಪಿಸುವ ಕಾರಣಗಳಿಂದ ಪ್ರೊಡಕ್ಟ್ ಆಯ್ಕೆ ಮಾಡುವವರಿಗೆ ಈ ಮಾಹಿತಿ ಮುಖ್ಯವಾಗಬಹುದು.
ಯಾವ ಪ್ರೊಡಕ್ಟ್ಗಳಿಗೆ ಇದು ಅನ್ವಯಿಸುತ್ತದೆ?
ನಿಯಮದಲ್ಲಿ ಸೋಪ್, ಶಾಂಪೂ, ಟೂತ್ಪೇಸ್ಟ್ ಮತ್ತು ಇತರ ಕಾಸ್ಮೆಟಿಕ್ಸ್ ಹಾಗೂ ಟಾಯ್ಲೆಟರಿಗಳನ್ನು ಉಲ್ಲೇಖಿಸಲಾಗಿದೆ. ಅಂದರೆ ಇದು ಕೇವಲ ಸೋಪ್ ಅಥವಾ ಟೂತ್ಪೇಸ್ಟ್ಗೆ ಮಾತ್ರ ಸೀಮಿತವಾಗಿರುವ ವಿಷಯವಲ್ಲ. ಆದರೆ, ಇಲ್ಲಿ ಒಂದು ಮುಖ್ಯ ವಿಚಾರ ಇದೆ. ಈ ಲೇಬಲಿಂಗ್ ವ್ಯವಸ್ಥೆಯ ಕಾನೂನು ಸ್ಥಿತಿ ಮತ್ತು ಅದನ್ನು ಕಡ್ಡಾಯವಾಗಿ ಜಾರಿಗೊಳಿಸುವ ವಿಚಾರದಲ್ಲಿ ನಂತರ ನಿಯಂತ್ರಣಾತ್ಮಕ ಚರ್ಚೆಗಳು ನಡೆದಿವೆ.
2021ರಲ್ಲಿ ಮಹತ್ವದ ಬೆಳವಣಿಗೆ ಏನಾಯ್ತು?
2021ರಲ್ಲಿ ಔಷಧ ತಾಂತ್ರಿಕ ಸಲಹಾ ಮಂಡಳಿ (Drugs Technical Advisory Board – DTAB) ಈ ವಿಚಾರವನ್ನು ಚರ್ಚಿಸಿತು. ಸೋಪ್, ಶಾಂಪೂ, ಟೂತ್ಪೇಸ್ಟ್ ಮತ್ತು ಇತರ ಕಾಸ್ಮೆಟಿಕ್ಸ್ ಹಾಗೂ ಟಾಯ್ಲೆಟರಿಗಳ ಮೇಲೆ ಗ್ರೀನ್ ಅಥವಾ ರೆಡ್/ಬ್ರೌನ್ ಡಾಟ್ ಅನ್ನು ಕಡ್ಡಾಯಗೊಳಿಸುವ ಪ್ರಸ್ತಾಪ ಮಂಡಳಿಯ ಮುಂದೆ ಇಡಲಾಗಿತ್ತು. ಆದರೆ DTAB ಒಂದು ಪ್ರಮುಖ ಸಮಸ್ಯೆಯನ್ನು ಗುರುತಿಸಿತು. ದೇಶದಲ್ಲಿ ಕಾಸ್ಮೆಟಿಕ್ಸ್ನಲ್ಲಿರುವ ಪದಾರ್ಥಗಳು ವೆಜಿಟೇರಿಯನ್ ಅಥವಾ ನಾನ್ವೆಜಿಟೇರಿಯನ್ ಮೂಲದ್ದೇ ಎಂದು ಪ್ರಮಾಣೀಕರಿಸಲು ಸ್ಪಷ್ಟವಾದ ವ್ಯವಸ್ಥೆ ಇಲ್ಲ ಎಂದು ಮಂಡಳಿ ಹೇಳಿತು.
ಈ ಕಾರಣದಿಂದ ಪ್ರತಿಯೊಂದು ಕಾಸ್ಮೆಟಿಕ್ ಪ್ರೊಡಕ್ಟ್ಗೂ ಇಂತಹ ಗುರುತನ್ನು ಕಡ್ಡಾಯಗೊಳಿಸಲು DTAB ಒಪ್ಪಲಿಲ್ಲ. ಬದಲಾಗಿ, ಕಂಪನಿಗಳು ತಮ್ಮ ನಿರ್ಧಾರದಂತೆ ಈ ಮಾಹಿತಿಯನ್ನು ವಾಲಂಟರಿ ಆಗಿ ಲೇಬಲ್ ಮಾಡಬಹುದು ಮತ್ತು ಈ ಬಗ್ಗೆ ಅಡ್ವೈಸರಿ ನೀಡುವ ಬಗ್ಗೆ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿತು.
ಸೋಪ್, ಶಾಂಪೂ ಅಥವಾ ಟೂತ್ಪೇಸ್ಟ್ ಖರೀದಿಸುವಾಗ ಕೇವಲ ಬ್ರ್ಯಾಂಡ್ ಅಥವಾ ಜಾಹೀರಾತು ನೋಡಿ ಖರೀದಿ ಮಾಡಬೇಡಿ. ಪ್ಯಾಕೆಟ್ನಲ್ಲಿರುವ ವೆಜ್–ನಾನ್ವೆಜ್ ಗುರುತು, Ingredients List ಮತ್ತು ಇತರ ಲೇಬಲ್ ಮಾಹಿತಿಯನ್ನು ಪರಿಶೀಲಿಸಿ.
ಒಂದು ಪ್ರೊಡಕ್ಟ್ ಬಗ್ಗೆ ಅನುಮಾನವಿದ್ದರೆ, ಅದರ ಅಧಿಕೃತ ವೆಬ್ಸೈಟ್ ಅಥವಾ ಪ್ಯಾಕೆಟ್ನಲ್ಲಿರುವ ತಯಾರಕರ ಮಾಹಿತಿಯನ್ನು ಪರಿಶೀಲಿಸುವುದು ಉತ್ತಮ. ನಿಮ್ಮ ದಿನನಿತ್ಯದ ಟಾಯ್ಲೆಟರಿ ಪ್ರೊಡಕ್ಟ್ಗಳಲ್ಲೂ ಏನಿದೆ ಅನ್ನೋದನ್ನು ತಿಳಿದುಕೊಂಡು ಖರೀದಿ ಮಾಡುವುದು ಕಸ್ಟಮರ್ ಆಗಿ ನಿಮ್ಮ ಹಕ್ಕು ಮತ್ತು ಜವಾಬ್ದಾರಿ ಎರಡೂ ಹೌದು.

