ನವದೆಹಲಿ: ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಬಳಸಲಾಗುವ ‘ಫಾರ್ಮ್ 6’ (Form 6) ಅನ್ನು ಬದಲಾಯಿಸಲು ಭಾರತೀಯ ಚುನಾವಣಾ ಆಯೋಗ (ECI) ಕೈಗೊಂಡಿರುವ ನಿರ್ಧಾರವು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಮತ್ತು ಸುಖ್ಬೀರ್ ಸಿಂಗ್ ಸಂಧು ಅವರು ಈ ಬದಲಾವಣೆಗಳನ್ನು ಕಾನೂನುಬಾಹಿರ ಮತ್ತು ಅನಧಿಕೃತ ಎಂದು ಕರೆದಿದ್ದು, ಹೊಸ ಮತದಾರರ ಹಿತದೃಷ್ಟಿಯಿಂದ ಇವುಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ಕ್ರಮ ಮತ್ತು ಚುನಾವಣಾ ಆಯುಕ್ತರ ಆಕ್ಷೇಪಣೆಗಳ ವರದಿ ಈಗ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಫಾರ್ಮ್ 6 ಅನ್ನು ತೀವ್ರ ಚರ್ಚೆಯ ಕೇಂದ್ರಬಿಂದುವಾಗಿಸಿದೆ.
ಏನಿದು ಫಾರ್ಮ್ 6?
ಭಾರತದಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಬಯಸುವ ಯಾರಾದರೂ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿರುವ ಫಾರ್ಮ್ 6 ಅನ್ನು ಭರ್ತಿ ಮಾಡುವುದು ಕಡ್ಡಾಯ. ಇದರಲ್ಲಿ ವೈಯಕ್ತಿಕ ವಿವರಗಳು, ಭಾವಚಿತ್ರ, ವಯಸ್ಸಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಕೇಳಲಾಗುತ್ತದೆ. ಈ ಅರ್ಜಿಯನ್ನು ಮತದಾರರ ನೋಂದಣಿ ನಿಯಮಗಳು, 1960 (Registration of Electors Rules, 1960) ರ ಅಡಿಯಲ್ಲಿ ನಿಗದಿಪಡಿಸಲಾಗಿದೆ.
ಬದಲಾವಣೆ ಏನು?
ಜುಲೈನಲ್ಲಿ ಆಯೋಗದ ‘ECINet’ ಪೋರ್ಟಲ್ನಲ್ಲಿರುವ ಫಾರ್ಮ್ 6 ರ ಆನ್ಲೈನ್ ಆವೃತ್ತಿಗೆ ಹೊಸ ಘೋಷಣೆಯನ್ನು (Declaration) ಸೇರಿಸುವ ಮೂಲಕ ಮಾರ್ಪಾಡು ಮಾಡಿದೆ. ಈ ಬದಲಾವಣೆಯ ಮೂಲಕ ಫಾರ್ಮ್ 6 ರಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (Special Intensive Revision – SIR) ಸಂಬಂಧಿಸಿದ ಪ್ರಶ್ನೆಗಳನ್ನು ಸೇರಿಸಲಾಗಿದೆ. ಅರ್ಜಿದಾರರು ಕೆಳಗಿನ ಮೂರು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಕಡ್ಡಾಯ.
1. 2000ರ ದಶಕದ ಆರಂಭದಲ್ಲಿ ನಡೆದ ಕೊನೆಯ ಎಸ್ಐಆರ್ (SIR) ವೇಳೆ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇತ್ತೇ?
2. ತಮ್ಮ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿಯ ಹೆಸರು ಆ ಪಟ್ಟಿಯಲ್ಲಿ ಇತ್ತೇ?
3. ತಮ್ಮ ಹೆಸರಾಗಲಿ ಅಥವಾ ತಮ್ಮ ಪೋಷಕರ ಹೆಸರಾಗಲಿ ಅದರಲ್ಲಿ ಇರಲಿಲ್ಲವೇ?
ಆನ್ಲೈನ್ನಲ್ಲಿ ಈ ಪ್ರಶ್ನೆಗೆ ಉತ್ತರಿಸದೆ ಅರ್ಜಿದಾರರು ಫಾರ್ಮ್ ಅನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಹಲವಾರು ರಾಜ್ಯಗಳಲ್ಲಿ ಕೊನೆಯ ಎಸ್ಐಆರ್ 2000ರ ದಶಕದ ಆರಂಭದಲ್ಲಿ ನಡೆದಿದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಕಳೆದ ವರ್ಷ ಅಥವಾ ಪ್ರಸಕ್ತ ವರ್ಷದಲ್ಲಿ ನಡೆದಿವೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಮ್ಮು – ಕಾಶ್ಮೀರ ವಿಧಾನಸಭೆಯಲ್ಲಿ ಪ್ರತಿಭಟನೆ

ವಿವಾದಕ್ಕೆ ಕಾರಣವೇನು?
ಫಾರ್ಮ್ 6 ಎಂಬುದು ‘ಮತದಾರರ ನೋಂದಣಿ ನಿಯಮಗಳು, 1960’ ರ ಭಾಗವಾಗಿರುವುದರಿಂದ ಕೇವಲ ಆನ್ಲೈನ್ ಫಾರ್ಮ್ ಅನ್ನು ಎಡಿಟ್ ಮಾಡುವ ಮೂಲಕ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸರ್ಕಾರದ ಅಧಿಕೃತ ಅಧಿಸೂಚನೆ ಮತ್ತು ನಿಯಮಗಳಿಗೆ ತಿದ್ದುಪಡಿ ತರುವ ಮೂಲಕವಷ್ಟೇ ಬದಲಾಯಿಸಬೇಕು ಎನ್ನುವ ವಾದ ಈಗ ಕೇಳಿ ಬಂದಿದೆ.
ಜನಪ್ರತಿನಿಧಿ ಕಾಯ್ದೆ, 1950 ರ ಸೆಕ್ಷನ್ 28 ರ ಅಡಿಯಲ್ಲಿ, ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ಸಂಪರ್ಕಿಸಿದ ನಂತರವೇ ಈ ನಿಯಮಗಳನ್ನು ರೂಪಿಸುತ್ತದೆ ಮತ್ತು ತಿದ್ದುಪಡಿ ಮಾಡುತ್ತದೆ. ಯಾವುದೇ ತಿದ್ದುಪಡಿಗಳನ್ನು ಸಂಸತ್ತಿನ ಮುಂದೆ ಮಂಡಿಸಬೇಕು ಮತ್ತು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಬೇಕಾಗುತ್ತದೆ. ಆದ್ದರಿಂದ ಈ ಬದಲಾವಣೆಯು “ಕಾನೂನುಬಾಹಿರ” ಮತ್ತು “ಅನಧಿಕೃತ” ಎಂದು ಬಣ್ಣಿಸಿದ ಸಂಧು ಮತ್ತು ಜೋಶಿ ಈ ವಿಷಯವನ್ನು ಸರ್ಕಾರಕ್ಕೆ ಕಳುಹಿಸುವಂತೆ ಸಲಹೆ ನೀಡಿದ್ದರು. ಆದರೆ ಮೇ ತಿಂಗಳಿನಲ್ಲಿ ಇಬ್ಬರು ಆಯುಕ್ತರು ವ್ಯಕ್ತಪಡಿಸಿದ ಆಕ್ಷೇಪಣೆಗಳ ಹೊರತಾಗಿಯೂ ಜುಲೈನಲ್ಲಿ ಚುನಾವಣಾ ಆಯೋಗವು ಈ ಬದಲಾವಣೆಯನ್ನು ಜಾರಿಗೆ ತಂದಿದೆ. ಇದನ್ನೂ ಓದಿ: ವಿಶ್ವದ ಎಲ್ಲೆಡೆ ಆಡಳಿತ ವಿರೋಧಿ ಅಲೆ ಇದೆ, ಆದರೆ ಮೋದಿಗಿಲ್ಲ ಯಾಕೆ? – ರಾಹುಲ್ ಪ್ರಶ್ನೆ
ಈ ಬದಲಾವಣೆಯ ಪರಿಣಾಮಗಳೇನು?
ವ್ಯಕ್ತಿಯೊಬ್ಬರ ಮತದಾನದ ಅರ್ಹತೆಯನ್ನು ಅವರ ವಯಸ್ಸು, ಪೌರತ್ವ ಮತ್ತು ಸಾಮಾನ್ಯ ವಾಸಸ್ಥಳದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ ವಿನಃ ಅವರ ಪೋಷಕರ ಹೆಸರು ಹಿಂದಿನ ಮತದಾರರ ಪಟ್ಟಿಯಲ್ಲಿ ಇತ್ತೇ ಅಥವಾ ಇಲ್ಲವೇ ಎಂಬುದರ ಮೇಲಲ್ಲ. ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇವುಗಳಲ್ಲಿ ಹೆಚ್ಚಿನವು ಮೃತಪಟ್ಟವರ, ಬೇರೆಡೆಗೆ ಸ್ಥಳಾಂತರಗೊಂಡವರ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ನಮೂದಾಗಿದ್ದವರ ಹೆಸರುಗಳೆಂದು ಹೇಳಲಾಗಿದ್ದರೂ ಹಲವು ಮಂದಿ ತಮ್ಮ ಹೆಸರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸುತ್ತಿದ್ದಾರೆ.
ಹೊಸ ಮತದಾರರ ಅರ್ಜಿಯಲ್ಲಿ ಹಿಂದಿನ ಎಸ್ಐಆರ್ ಸಂಬಂಧಿತ ಪ್ರಶ್ನೆಯನ್ನು ಸೇರಿಸಿರುವುದು, ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಬಯಸುವ ಯುವಕರ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳವನ್ನು ಹುಟ್ಟುಹಾಕಿದೆ. ಉದಾಹರಣೆಗೆ ಪೋಷಕರು ಅಥವಾ ಅಜ್ಜ-ಅಜ್ಜಿಯ ಹೆಸರು ಹಿಂದಿನ ಸಂಬಂಧಿತ ಎಸ್ಐಆರ್ ಪಟ್ಟಿಯಲ್ಲಿ ಇಲ್ಲದ 18 ವರ್ಷದ ಯುವಕನೊಬ್ಬ, ಮೊದಲ ಎರಡು ಆಯ್ಕೆಗಳನ್ನು ಆರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ಅರ್ಜಿದಾರರು ಮೂರನೇ ಆಯ್ಕೆಯಾದ ಯಾವುದೂ ಅಲ್ಲ (Neither) ಎಂಬುದನ್ನು ಆರಿಸಿದರೆ ಏನಾಗುತ್ತದೆ ಎಂಬುದನ್ನು ಫಾರ್ಮ್ನಲ್ಲಿ ಎಲ್ಲಿಯೂ ವಿವರಿಸಲಾಗಿಲ್ಲ.

ಮತ್ತೆ ಅರ್ಜಿ ಸಲ್ಲಿಸಬೇಕು:
ಬಿಹಾರದಲ್ಲಿ 2025ರ ಜೂನ್ನಲ್ಲಿ ಪ್ರಾರಂಭವಾದ ಪ್ರಸ್ತುತ ಎಸ್ಐಆರ್ ಪ್ರಕ್ರಿಯೆಯ ಅಡಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ 13 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಹಲವು ವರ್ಷಗಳಿಂದ ಮತದಾರರಾಗಿ ನೋಂದಾಯಿಸಿಕೊಂಡಿದ್ದ ಇಂತಹ ಹಲವು ಮತದಾರರಿಗೆ, ಪರಿಷ್ಕೃತ ಪಟ್ಟಿಯಲ್ಲಿ ಹೆಸರು ಮರುಸೇರ್ಪಡೆ ಮಾಡಿಕೊಳ್ಳಲು ಇದೀಗ ‘ಫಾರ್ಮ್ 6’ ಅನ್ನೇ ಬಳಸುವಂತೆ ಸೂಚಿಸಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ಚುನಾವಣಾ ಆಯುಕ್ತರಾಗಿದ್ದವರು `ಕೈʼ ಟಿಕೆಟ್ನಲ್ಲಿ ಸ್ಪರ್ಧಿಸಿ ಮಂತ್ರಿಯಾಗಿದ್ದರು – ಸಂಬಿತ್ ಪಾತ್ರ ತಿರುಗೇಟು
ಜನಪ್ರತಿನಿಧಿ ಕಾಯ್ದೆ, 1950 ರ ಸೆಕ್ಷನ್ 31 ರ ಅಡಿಯಲ್ಲಿ, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಿಳಿದೂ ಸುಳ್ಳು ಘೋಷಣೆಯನ್ನು ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಆಯೋಗದ ಹೇಳಿಕೆ ಏನು?
ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು ಆಂತರಿಕ ಸಮಾಲೋಚನೆಗಳ ವೇಳೆ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಕಳೆದ ಒಂದು ವರ್ಷದಲ್ಲಿ ಪೂರ್ಣ ಪ್ರಮಾಣದ ಆಯೋಗ ಕೈಗೊಂಡ ಎಲ್ಲಾ ನಿರ್ಧಾರಗಳು ಸರ್ವಾನುಮತದಿಂದ ಕೂಡಿವೆ ಎಂದು ಸ್ಪಷ್ಟನೆ ನೀಡಿದೆ.

