– ಹೊಸ ಘೋಷಣೆ ಮಾಡುವಾಗ ಯೋಚಿಸಿ ಅಂತಾ ಆರ್ಥಿಕ ಇಲಾಖೆ ಹೇಳಿದೆ ಎಂದ ಸಚಿವ
ಮೈಸೂರು: 2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನನಗೆ ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದು ಹೇಳಿದ್ದೆ. ಈಗ ಡಿ.ಕೆ ಶಿವಕುಮಾರ್ (DK Shivakumar) ಅವರು ನಾನೇ ಮುಂದೇಯೂ ಸಿಎಂ ಅಂತಾ ಹೇಳ್ತಿದ್ದಾರೆ. ನನಗೆ ಸಂತೋಷ, 2028ಕ್ಕೂ ಅವ್ರೇ ಸಿಎಂ ಆಗಲಿ, ಮಅವರಿಂದಲೇ ಪಕ್ಷ ಅಧಿಕಾರಕ್ಕ ಬರಲಿ. ನನಗೆ ಇನ್ನೂ ವಯಸ್ಸಿದೆ, ಕಾಯುತ್ತೇನೆ ಎಂದು ತಿಳಿಸಿದ್ದಾರೆ.
ಸರ್ಕಾರ ದಿವಾಳಿಯಾಗಿಲ್ಲ
ಇನ್ನೂ ಆರ್ಥಿಕ ಇಲಾಖೆಯ ಪತ್ರ (Finance Department Letter) ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್ಥಿಕ ಇಲಾಖೆ ಸರ್ಕಾರ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಿಲ್ಲ. ಬಜೆಟ್ ನಲ್ಲಿ ಏನು ಘೋಷಣೆ ಮಾಡಿದ್ದೇವೆ ಅಷ್ಟಕ್ಕೆ ಮಾತ್ರ ನಮ್ಮ ಬಳಿ ಹಣ ಇದೆ ಎಂದು ಹೇಳಿದ್ದಾರೆ. ಹೊಸ ಘೋಷಣೆಗಳಿಗೆ ಹಣ ಹೊಂದಿಸುವುದು ಕಷ್ಟ ಎಂದು ಹೇಳಿದೆ. ಇದನ್ನ ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತೆ. ಹೊಸ ಘೋಷಣೆ ಮಾಡುವಾಗ ಯೋಚನೆ ಮಾಡಿ ಘೋಷಿಸಿ ಎಂದು ಹೇಳಿದ್ದಾರೆ. ಅದನ್ನು ನಾವು ಗಮನಿಸುತ್ತೇವೆ. ಕೆಲವೊಂದು ಇಲಾಖೆಗಳಲ್ಲಿ ಹಣ ವೆಚ್ಚಾಗುವುದಿಲ್ಲ. ಆ ಹಣವನ್ನ ಹೊಸ ಘೋಷಣೆಗಳಿಗೆ ಬಳಸುತ್ತೇವೆ. ಆರ್ಥಿಕ ಇಲಾಖೆ ಪತ್ರದ ಅರ್ಥ ಸರ್ಕಾರ ದಿವಾಳಿಯಾಗಿದೆ ಎಂಬುದು ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನೂ ತಮ್ಮ ಮೇಲಿನ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕ್ಷಣದಲ್ಲಿ ಇಡಿಯಿಂದ ನನಗೆ ನೋಟಿಸ್ ಬರಬಹುದು. ನೋಟಿಸ್ ಬಂದೇ ಬರುತ್ತದೆ, ಬಂದಾಗ ಹೋಗಿ ಉತ್ತರ ಕೊಡುತ್ತೇನೆ. ವಿದೇಶದಲ್ಲಿ ನಾವು ಹಣ ಹೂಡಿಕೆ ಮಾಡಿದ್ದೇವೊ ಇಲ್ಲವೊ ಎಂಬುದನ್ನ ನಾನು ಇಲ್ಲಿ ಮಾತನಾಡುವುದಿಲ್ಲ, ಇಡಿ ಮುಂದೆ ಉತ್ತರ ಕೊಡುತ್ತೇನೆ. ಯಾವುದೋ ಕಮಿಷನ್ ವಿಚಾರಕ್ಕೆ ದಾಳಿಯಾಗಿದೆಯೋ ಬೇರೆ ವಿಚಾರಕ್ಕೆ ದಾಳಿಯಾಗಿದೆಯೋ ಅದನ್ನ ಇಡಿಗೆ ಹೇಳುತ್ತೇನೆ ಎಂದಿದ್ದಾರೆ.
ಇಡಿಯದ್ದು ಸಂಪೂರ್ಣ ರಾಜಕೀಯ ದಾಳಿ
ಇಡಿಯದ್ದು ಸಂಪೂರ್ಣವಾಗಿ ರಾಜಕೀಯ ದಾಳಿ. ಕಳೆದ 14 ವರ್ಷಗಳಿಂದ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಮೇಲೆ ಒಂದೇ ಒಂದು ಇಡಿ ದಾಳಿಯೂ ಆಗಿಲ್ಲ. ನನ್ನ ಮೇಲೆ ಯಾರೇ ದೂರು ಕೊಟ್ಟಿರಲಿ ಅದು ಪ್ರಶ್ನೆ ಅಲ್ಲ. ಆದ್ರೆ ಇದು ರಾಜಕೀಯವಾಗಿ ಮಾಡಿರುವ ದಾಳಿ. ಯಾರು ದೂರು ಕೊಟ್ಟಿದ್ದಾರೆ ಏನು ಹಿನ್ನಲೆ ಎಂಬುದನ್ನ ಗಮನಿಸುತ್ತಿದ್ದೇನೆ. ಎಲ್ಲವೂ ನನಗೆ ಗೊತ್ತಾಗುತ್ತಿದೆ, ಇಡಿ ದಾಳಿಯಿಂದ ನಾನೇನು ಮಾನಸಿಕವಾಗಿ ಕುಂದಿಲ್ಲ. ಎಲ್ಲವನ್ನೂ ನಾನು ರಾಜಕೀಯವಾಗಿ ಹೆದರಿಸುತ್ತೇನೆ ಎಂದಿದ್ದಾರೆ ಜಾರಕಿಹೊಳಿ.

