– ಸೆ.24 ರಿಂದ 15 ದಿನ; ಒಟ್ಟು 5.18 ಟಿಎಂಸಿ ಹರಿವು ಖಚಿತಪಡಿಸುವಂತೆ ನಿರ್ದೇಶನ
ನವದೆಹಲಿ: ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಕೊರತೆಯಾಗುತ್ತಿದ್ದು, ಈ ನಡುವೆ ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.
ದೆಹಲಿಯಲ್ಲಿ ಅಧ್ಯಕ್ಷ ಎಸ್‌ಕೆ ಹಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹದಿನೈದು ದಿನ ನಿತ್ಯ ನಾಲ್ಕು ಸಾವಿರ ಕ್ಯೂಸೆಕ್ ನೀರು ( 5.5 ಟಿಎಂಸಿ) ಹರಿಸುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸು ಪಾಲನೆ ಮಾಡಲು ಸೂಚಿಸಿದೆ.
ಸಭೆಯಲ್ಲಿ ಭಾಗಿಯಾಗಿದ್ದ ಕರ್ನಾಟಕ ನೀರಾವರಿ ನಿಗಮದ ಎಂಡಿ ಪ್ರಬಲ ವಾದ ಮಂಡಿಸಿದರು. ರಾಜ್ಯದ ನಾಲ್ಕು ಪ್ರಮುಖ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕುಸಿದಿದ್ದು, ನೀರಿನ ಲಭ್ಯತೆಯಲ್ಲಿ ಶೇ.52.61ರಷ್ಟು ಕೊರತೆಯಾಗಿದೆ ಎಂದು ಹೇಳಿದರು.
ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಈ ವರ್ಷ 113.632 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ಇದೇ ಅವಧಿಯ 30 ವರ್ಷಗಳ ಸರಾಸರಿ ಒಳಹರಿವು 239.815 ಟಿಎಂಸಿ ಆಗಿದ್ದು, ಸರಾಸರಿಗೆ ಹೋಲಿಸಿದರೆ 52.61% ಕೊರತೆಯಾಗಿದೆ. ಪ್ರಸ್ತುತ ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ 49.775 ಟಿಎಂಸಿ ನೀರು ಸಂಗ್ರಹವಿದೆ. ಆದರೆ, ಕುಡಿಯುವ ನೀರು, ಪರಿಸರ ಹರಿವು ಮತ್ತು ಆವಿಯಾಗುವಿಕೆಗೆ ಅಗತ್ಯವಿರುವ ಪ್ರಮಾಣವನ್ನು ಹೊರತುಪಡಿಸಿದ ಬಳಿಕ ನೀರಾವರಿಗೆ ಉಳಿಯುವುದು ಕೇವಲ 4.775 ಟಿಎಂಸಿ ಮಾತ್ರ.
ರಾಜ್ಯದ ನೀರಾವರಿ ಅಗತ್ಯವೇ 23.40 ಟಿಎಂಸಿ ಇರುವುದರಿಂದ, ಲಭ್ಯ ನೀರು ಮತ್ತು ಅಗತ್ಯದ ನಡುವೆ ದೊಡ್ಡ ಅಂತರವಿದೆ. ಇದರ ಜೊತೆಗೆ ಜಲಾಶಯಗಳಿಗೆ ಒಳಹರಿವು ಸುಮಾರು 2,200 ಕ್ಯೂಸೆಕ್‌ಗೆ ಕುಸಿದಿರುವುದರಿಂದ, ಕುಡಿಯುವ ನೀರು ಸೇರಿದಂತೆ ಆದ್ಯತೆಯ ಅಗತ್ಯಗಳನ್ನು ರಕ್ಷಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯಗಳಿಂದ ಮತ್ತಷ್ಟು ನೀರು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಕರ್ನಾಟಕ CWRCಗೆ ತಿಳಿಸಿತ್ತು.
ನಿಗದಿಗಿಂತ 2.219 ಟಿಎಂಸಿ ಹೆಚ್ಚು ಹರಿಸಿದೆ
ಈಗಾಗಲೇ CWRC ಮತ್ತು CWMA ಸೂಚಿಸಿದ್ದ ಒಟ್ಟು ಹರಿವಿನ ಪ್ರಮಾಣವನ್ನು ಕರ್ನಾಟಕ ಪೂರೈಸಿದೆ ಎಂದು ರಾಜ್ಯ ಪ್ರತಿಪಾದಿಸಿತು. CWRC/CWMA ಸೂಚಿಸಿದ್ದ ಒಟ್ಟು 36.418 ಟಿಎಂಸಿ ಹರಿವಿನ ಬದಲಿಗೆ, ಬಿಳಿಗುಂಡ್ಲುವಿನಲ್ಲಿ 38.637 ಟಿಎಂಸಿ ನೀರು ಹರಿಸಲಾಗಿದೆ. ಅಂದರೆ ನಿಗದಿತ ಪ್ರಮಾಣಕ್ಕಿಂತ 2.219 ಟಿಎಂಸಿ ಹೆಚ್ಚುವರಿ ನೀರು ಹರಿಸಲಾಗಿದೆ.
ತಮಿಳುನಾಡಿನಲ್ಲಿ ಸುಮಾರು 184.96 ಟಿಎಂಸಿ ನೀರು ಲಭ್ಯವಿದೆ ಎಂದು ಕರ್ನಾಟಕ ಅಂದಾಜು ಮಂಡಿಸಿತು. ಸಂಕಷ್ಟ ಪರಿಸ್ಥಿತಿಗೆ ಹೊಂದಿಸಿದ ಕುರುವೈ–ಸಾಂಬಾ ಬೆಳೆಗಳಿಗೆ ತಮಿಳುನಾಡಿಗೆ 114.274 ಟಿಎಂಸಿ ಅಗತ್ಯವಿದ್ದು, ಲಭ್ಯ ನೀರು ಈ ಬೆಳೆಗಳನ್ನು ಮುಂದುವರಿಸಲು ಸಾಕಾಗುತ್ತದೆ ಎಂದು ಕರ್ನಾಟಕ ವಾದಿಸಿತು.
ತಮಿಳುನಾಡು ಕುರುವೈ ಬೆಳೆ ಪ್ರದೇಶವನ್ನು 4.30 ಲಕ್ಷ ಎಕರೆಗಳಿಂದ 8.41 ಲಕ್ಷ ಎಕರೆಗೆ ವಿಸ್ತರಿಸಿದೆ. ಸಂಕಷ್ಟದ ಪರಿಸ್ಥಿತಿಯಲ್ಲೂ ಸಾಂಬಾ ಬೆಳೆ ಮುಂದುವರಿಸಿರುವುದರಿಂದ ಕರ್ನಾಟಕದಿಂದ ಮತ್ತಷ್ಟು ನೀರು ಬಿಡುಗಡೆ ಮಾಡುವ ಒತ್ತಡ ಹೆಚ್ಚಾಗಿದೆ ಎಂದು ಕರ್ನಾಟಕ ಆಕ್ಷೇಪಿಸಿತು.
14.981 ಟಿಎಂಸಿ ಬ್ಯಾಕ್‌ಲಾಗ್ ಇದೆ ಎಂದ ತಮಿಳುನಾಡು
ಇದಕ್ಕೆ ಪ್ರತಿಯಾಗಿ ತಮಿಳುನಾಡು ತನ್ನ ಜಲಾಶಯದಲ್ಲಿ ಲಭ್ಯವಿರುವ ನೀರು ಈಶಾನ್ಯ ಮುಂಗಾರು ಬರುವವರೆಗೆ ಡೆಲ್ಟಾ ಪ್ರದೇಶದ ನೀರಾವರಿ ಮುಂದುವರಿಸಲು ಸಾಕಾಗುವುದಿಲ್ಲ ಎಂದು ವಾದಿಸಿತು. ತನ್ನ ಪಾಲು 57.190 ಟಿಎಂಸಿ ಆಗಬೇಕಿದ್ದರೂ, ಬಿಳಿಗುಂಡ್ಲುವಿನಲ್ಲಿ 42.209 ಟಿಎಂಸಿ ಮಾತ್ರ ಲಭಿಸಿದೆ. ಹೀಗಾಗಿ 14.981 ಟಿಎಂಸಿ ಬ್ಯಾಕ್‌ಲಾಗ್ ಇದೆ ಎಂದು ತಮಿಳುನಾಡು ತಿಳಿಸಿತು.
ಕರ್ನಾಟಕ ತನ್ನ ಜಲಾಶಯಗಳ ನೀರನ್ನು ಕಾಲುವೆಗಳು, ಅಣೆಕಟ್ಟುಗಳು, ಏತ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಗಳ ಮೂಲಕ ಬಳಸುತ್ತಿರುವ ಬಗ್ಗೆ ತಮಿಳುನಾಡು ಪ್ರಶ್ನಿಸಿತು. ಅಲ್ಲದೆ, ಕರ್ನಾಟಕದ ಉಳಿದ ಖಾರಿಫ್ ನೀರಾವರಿ ಅಗತ್ಯ ಸುಮಾರು 9 ಟಿಎಂಸಿ ಮಾತ್ರ ಎಂದು ತಮಿಳುನಾಡು ಅಂದಾಜಿಸಿತು.
14.981 ಟಿಎಂಸಿ ಬ್ಯಾಕ್‌ಲಾಗ್‌ನ್ನು ಕರ್ನಾಟಕದಿಂದ ಪೂರೈಸಿಸುವಂತೆ ನಿರ್ದೇಶನ ನೀಡಬೇಕು ಹಾಗೂ ಸೆ.25ರಿಂದ ಅ.10ರವರೆಗೆ ಬಿಳಿಗುಂಡ್ಲುವಿನಲ್ಲಿ 22.519 ಟಿಎಂಸಿ ನೀರು ಖಚಿತಪಡಿಸಬೇಕು ಎಂದು ತಮಿಳುನಾಡು ಮನವಿ ಮಾಡಿತ್ತು.
ಎರಡೂ ರಾಜ್ಯಗಳ ವಾದ ಆಲಿಸಿ CWRC ತೀರ್ಮಾನ
ಕರ್ನಾಟಕ ಮತ್ತು ತಮಿಳುನಾಡು ಮಂಡಿಸಿದ ವಾದಗಳನ್ನು ಪರಿಗಣಿಸಿದ ಬಳಿಕ CWMA, ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ. ಸೆ.24ರ ಬೆಳಗ್ಗೆ 8 ಗಂಟೆಯಿಂದ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ 4,000 ಕ್ಯೂಸೆಕ್ ಹರಿವು ಖಚಿತಪಡಿಸಬೇಕು ಎಂದು ಸಮಿತಿ ನಿರ್ಧರಿಸಿದೆ. ಈ 15 ದಿನಗಳ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಒಟ್ಟು 5.18 ಟಿಎಂಸಿ ನೀರಿನ ಹರಿವು ಖಚಿತಪಡಿಸಬೇಕಿದೆ.

