ನವದೆಹಲಿ: ‘ಎಂಟಿ ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026’ ಬಿಡುಗಡೆಯಾಗಿದೆ. ಈ ಬಾರಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿ (Gautam Adani) ಹಾಗೂ ಅವರ ಕುಟುಂಬ, ಮುಕೇಶ್ ಅಂಬಾನಿ (Mukesh Ambani) ಅವರನ್ನು ಹಿಂದಿಕ್ಕಿ ಮತ್ತೆ ಮೊದಲ ಸ್ಥಾನಕ್ಕೇರಿದ್ದಾರೆ.
ಅದಾನಿ ಹಾಗೂ ಕುಟುಂಬದ ಒಟ್ಟು ಸಂಪತ್ತು ಶೇ.13ರಷ್ಟು ಏರಿಕೆಯಾಗಿದ್ದು, 9.23 ಲಕ್ಷ ಕೋಟಿ ರೂ.ಗೆ ತಲುಪಿದೆ. ಮತ್ತೊಂದೆಡೆ, ಮುಕೇಶ್ ಅಂಬಾನಿ ಹಾಗೂ ಕುಟುಂಬದ ಸಂಪತ್ತು ಶೇ.10ರಷ್ಟು ಕುಸಿದು 8.63 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಇದರಿಂದಾಗಿ ಅದಾನಿ ಹಾಗೂ ಅಂಬಾನಿ ಕುಟುಂಬಗಳ ಸಂಪತ್ತಿನ ನಡುವೆ ಸುಮಾರು 59,400 ಕೋಟಿ ರೂ. ವ್ಯತ್ಯಾಸ ಉಂಟಾಗಿದೆ.
ಮೂರನೇ ಸ್ಥಾನದಲ್ಲಿ ಲಕ್ಷ್ಮಿ ಮಿತ್ತಲ್
ಉಕ್ಕು ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಹಾಗೂ ಅವರ ಕುಟುಂಬದ ಸಂಪತ್ತು ಈ ಬಾರಿ ಏರಿಕೆ ಕಂಡಿದೆ. ಅವರ ಸಂಪತ್ತು ಸುಮಾರು ಎರಡು ಪಟ್ಟು ಹೆಚ್ಚಾಗಿ 3.39 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದರೊಂದಿಗೆ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಔಷಧ ತಯಾರಿಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ ನಾಲ್ಕನೇ ಸ್ಥಾನದಲ್ಲಿದ್ದಾರೆ.
ದೇಶದಲ್ಲಿ 391 ಶತಕೋಟ್ಯಧಿಪತಿಗಳು
ಭಾರತದಲ್ಲಿ ಶತಕೋಟ್ಯಧಿಪತಿಗಳು ಸಂಖ್ಯೆಯೂ ಹೊಸ ದಾಖಲೆ ಬರೆದಿದೆ. ಈ ಬಾರಿ ದೇಶದಲ್ಲಿ 391 ಶತಕೋಟ್ಯಧಿಪತಿಗಳು ಇದ್ದಾರೆ ಎಂದು ವರದಿ ತಿಳಿಸಿದೆ. ಕನಿಷ್ಠ 1,000 ಕೋಟಿ ರೂ. ಸಂಪತ್ತು ಹೊಂದಿರುವ ಶ್ರೀಮಂತರ ಸಂಖ್ಯೆ ಕೂಡ 1,810ಕ್ಕೆ ಏರಿಕೆಯಾಗಿದೆ. ಇವರ ಒಟ್ಟು ಸಂಪತ್ತು ಸುಮಾರು 187.5 ಲಕ್ಷ ಕೋಟಿ ರೂ. ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಇಂದು CWRC, CWMA ಹೈವೋಲ್ಟೇಜ್ ಮೀಟಿಂಗ್ – ಇಂದಾದ್ರೂ ಕರ್ನಾಟಕದ ಪರ ಬರುತ್ತಾ ಆದೇಶ?
ಬೆಂಗಳೂರಿನ ನಾಗೇಂದ್ರ ನಾಗರಾಜ್‌ಗೂ ಸ್ಥಾನ
ಈ ಬಾರಿ ಬೆಂಗಳೂರಿನ ಉದ್ಯಮಿಗೂ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಕ್ವಾಂಟಂ ಕಂಪ್ಯೂಟರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗೇಂದ್ರ ನಾಗರಾಜ್ ಮೊದಲ ಬಾರಿಗೆ ಈ ಪಟ್ಟಿಗೆ ಪ್ರವೇಶ ಪಡೆದಿದ್ದಾರೆ. ಅವರ ಸಂಪತ್ತು ಸುಮಾರು 1,700 ಕೋಟಿ ರೂ. ಎಂದು ವರದಿ ತಿಳಿಸಿದೆ.ಇದನ್ನೂ ಓದಿ: ಬರ ಹಿನ್ನೆಲೆ ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ: ಈಶ್ವರ ಖಂಡ್ರೆ

