ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪದ ವೇಳೆ ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷದ ಶಾಸಕರ ನಡುವಿನ ಆಂತರಿಕ ಅಸಮಾಧಾನ ಮತ್ತು ಬಣ ರಾಜಕೀಯ ಸದನದಲ್ಲೇ ಬಹಿರಂಗವಾಗಿ ಸ್ಫೋಟಗೊಂಡಿದೆ.
ಭೋಜನ ವಿರಾಮದ ಬಳಿಕ ಕಲಾಪ ಮುಂದೂಡಿಕೆಯಾಗುತ್ತಿದ್ದಂತೆ, ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಶಾಸಕಿ ರೂಪಾ ಶಶಿಧರ್(Roopa Shashidhar) ತಮ್ಮದೇ ಪಕ್ಷದ ಶಾಸಕರ ಎದುರು ಮೇಜು ಕುಟ್ಟಿ ಸಿಟ್ಟು ಹೊರಹಾಕಿದ ಪ್ರಸಂಗ ನಡೆದಿದೆ.
ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಕಲಾಪ ಮುಂದೂಡಿಕೆಯಾಗುತ್ತಿದ್ದಂತೆಯೇ ಸದನದೊಳಗೆ ಈ ಅನಿರೀಕ್ಷಿತ ಹೈಡ್ರಾಮಾ ನಡೆದಿದೆ. ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ (Narayanaswamy) ಹಾಗೂ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(Subbareddy) ಅವರು ತಮ್ಮ ಆಸನಗಳಲ್ಲಿ ಕುಳಿತು ನಗುನಗುತ್ತಾ ಪರಸ್ಪರ ಮಾತನಾಡುತ್ತಿದ್ದರು. ಇದನ್ನೂ ಓದಿ: KPSC Scam| ಹೈಕೋರ್ಟ್ನ ಎಸ್ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ
ಇದನ್ನು ಗಮನಿಸಿದ ಕೆಜಿಎಫ್ (KGF) ಶಾಸಕಿ ರೂಪಾ ಶಶಿಧರ್ ಅವರು ನೇರವಾಗಿ ಇಬ್ಬರು ಶಾಸಕರು ಕುಳಿತಿದ್ದ ಆಸನದ ಬಳಿ ಧಾವಿಸಿದರು. ತನ್ನ ಬಗ್ಗೆಯೇ ಮಾತನಾಡುತ್ತಾ ಅಪಹಾಸ್ಯ ಮಾಡುತ್ತಿದ್ದಾರೆ, ಹೀಯಾಳಿಸಿ ನಗುತ್ತಿದ್ದಾರೆ ಎಂದು ತೀವ್ರ ಆಕ್ರೋಶಗೊಂಡ ರೂಪಾ ಶಶಿಧರ್, ಶಾಸಕ ನಾರಾಯಣಸ್ವಾಮಿ ವಿರುದ್ಧ ಏಕಾಏಕಿ ಏರುದನಿಯಲ್ಲಿ ವಾಗ್ದಾಳಿ ನಡೆಸಿದರು.
ನಾರಾಯಣಸ್ವಾಮಿ ಅವರ ಎದುರಗಡೆ ನಿಂತು ರೊಚ್ಚಿಗೆದ್ದ ರೂಪಾ ಶಶಿಧರ್, “ಏನು ನನ್ನನ್ನು ಅಪಮಾನ ಮಾಡ್ತಾ ಇದ್ದೀರಾ? ನೀವೆಲ್ಲಾ ಒಂದಾಗಿದ್ದೀರಿ, ನನಗೇನು ಮಾಡೋಕೆ ಆಗುತ್ತೆ? ಎಂದು ಜೋರಾಗಿ ಕೂಗಾಡಿದರು. ಅಷ್ಟಕ್ಕೇ ಸಮಾಧಾನಗೊಳ್ಳದೆ, ಎದುರಿಗಿದ್ದ ಮೇಜನ್ನು ಬಡಿದು ತಮ್ಮ ತೀವ್ರ ಅಸಮಾಧಾನ ಹಾಗೂ ಆಕ್ರೋಶವನ್ನು ಹೊರಹಾಕಿದರು.
ಆಡಳಿತ ಪಕ್ಷದ ಸದಸ್ಯರ ನಡುವಿನ ಈ ಜಟಾಪಟಿಯನ್ನು ದೂರದಿಂದಲೇ ಕಣ್ಣಾರೆ ವೀಕ್ಷಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಕಾಲೆಳೆದರು. “ಇಲ್ಲೊಂದು ದೊಡ್ಡ ಗಲಾಟೆ ನಡೀತಾ ಇದೆ ನೋಡಿ… ಸುಮ್ನಿರಮ್ಮಾ, ಹೊಡಿಬೇಡ ಅವನಿಗೆ!” ಎಂದು ತಮಾಷೆಯಾಗಿ ವ್ಯಂಗ್ಯವಾಡಿದರು. ಅಶೋಕ್ ಅವರ ಈ ಕಮೆಂಟ್ಗೆ ಇಡೀ ಸದನದಲ್ಲಿ ನಗೆಯ ಅಲೆ ಎದ್ದಿತು.

