– ಚುನಾವಣಾ ಅಕ್ರಮಗಳಿಲ್ಲದೆ ರಾಜಕೀಯ ಮಾಡಲು ಕಾಂಗ್ರೆಸ್ಗೆ ಸಾಧ್ಯವಿಲ್ಲ
– ಮೂವರು ಆಯುಕ್ತರ ಸಹಿ ನಂತರವೇ SIR
– ಸ್ವಾತಂತ್ರ್ಯ ಬಂದಾಗಿನಿಂದ 2023ರವರೆಗೆ ಪ್ರಧಾನಿಯಿಂದಲೇ ಆಯುಕ್ತರ ನೇಮಕ
ನವದೆಹಲಿ: ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ನಿಂತಿದ್ದೇವೆ, ಯಾರನ್ನೂ ಬಚಾವ್ ಮಾಡಲು ಅಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳು ಮತ್ತು ರಾಹುಲ್ ಗಾಂಧಿ(Rahul Gandhi) ವಿರುದ್ಧ ಬಿಜೆಪಿ ವಕ್ತಾರ ಸಂಬಿತ್ ಪಾತ್ರ(Sambit Patra) ತೀವ್ರ ವಾಗ್ದಾಳಿ ನಡೆದಿದ್ದಾರೆ.
ಕೇಂದ್ರ ಚುನಾವಣಾ ಆಯೋಗದಲ್ಲಿನ (ECI) ಆಂತರಿಕ ಚರ್ಚೆಗಳು ಹಾಗೂ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಸೇರಿದಂತೆ ವಿರೋಧ ಪಕ್ಷಗಳ ಆರೋಪಗಳಿಗೆ ಅವರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದರು.
ನಾವು ಯಾವುದೇ ಒಬ್ಬ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿಲ್ಲ. ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ನಮ್ಮ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಹರಡಲಾಗುತ್ತಿರುವ ದುರುದ್ದೇಶಪೂರಿತ ಅಪಪ್ರಚಾರವನ್ನು ಹಿಮ್ಮೆಟ್ಟಿಸಲು ನಿಂತಿದ್ದೇವೆ ಎಂದು ಗುಡುಗಿದರು. ಪ್ರತಿಪಕ್ಷಗಳ ‘ಸರ್ವಾಧಿಕಾರ’ದ ಆರೋಪಗಳನ್ನು ತಳ್ಳಿಹಾಕಿ, ಪ್ರಸ್ತುತ ಚುನಾವಣಾ ಪ್ರಕ್ರಿಯೆ ಮತ್ತು ಆಯೋಗದ ಕಾರ್ಯವೈಖರಿಯನ್ನು ಬಲವಾಗಿ ಸಮರ್ಥಿಸಿಕೊಂಡರು.
#WATCH | Delhi: BJP MP Sambit Patra says, “…I could present the election results right up to 2024, demonstrating that the electoral process has proceeded very smoothly from 2014 to the present. Now, regarding the issue of electoral malpractice, it is virtually impossible for… https://t.co/Vugf7eysRz pic.twitter.com/wYuZTP1ykw
— ANI (@ANI) September 23, 2026
ಸುದ್ದಿಗೋಷ್ಠಿಯಲ್ಲಿ ಪಾತ್ರ ಹೇಳಿದ್ದೇನು?
ಕಾಂಗ್ರೆಸ್ ಇತಿಹಾಸವನ್ನು ಕೆದಕಿದ ಪಾತ್ರ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚುನಾವಣಾ ಅಕ್ರಮಗಳಿಲ್ಲದೆ ರಾಜಕೀಯ ಮಾಡಲು ಅವರಿಗೆ ಸಾಧ್ಯವೇ ಇರಲಿಲ್ಲ. ಕಾಂಗ್ರೆಸ್ನ ಚುನಾವಣಾ ಆಯುಕ್ತರಾಗಿದ್ದವರು ನಂತರ ಸಚಿವರಾದರು, ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿದರು. 2005ರಲ್ಲಿ ಸೋನಿಯಾ ಗಾಂಧಿ ಅವರು ನವೀನ್ ಚಾವ್ಲಾ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿದರು. 2009ರಲ್ಲಿ ಸೋನಿಯಾ ಗಾಂಧಿ ಅವರ ಅನರ್ಹತೆ ಪ್ರಕರಣ ಬಂದಾಗ ಅಂದಿನ ಇಬ್ಬರು ಆಯುಕ್ತರು ಅವರ ಪರವಾಗಿ ನಿಂತು ಭಿನ್ನಾಭಿಪ್ರಾಯ ದಾಖಲಿಸಿದ್ದರು. ಮುಖ್ಯ ಚುನಾವಣಾ ಆಯುಕ್ತರು ತನಿಖೆ ಅಗತ್ಯ ಎಂದಿದ್ದರು. ಆದರೆ ಅದನ್ನು ಮುಚ್ಚಿಹಾಕಿ ಚಾವ್ಲಾ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಮಾಡಲಾಯಿತು. ಕಾಂಗ್ರೆಸ್ಗೆ ಆ ಚುನಾವಣೆಯಲ್ಲಿ ಗೆಲುವು ತಂದುಕೊಡಲಾಯಿತು. ಅಂದು ಸಂಸತ್ತಿನಲ್ಲಿದ್ದ ರಾಹುಲ್ ಗಾಂಧಿ ಇವತ್ತಿನಂತೆ ಟೀ ಶರ್ಟ್ ಹಾಕಿಕೊಂಡು ಬಂದು ಸುದ್ದಿಗೋಷ್ಠಿ ನಡೆಸಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿದ್ದರಿಂದಲೇ ಬಿಜೆಪಿ ಬಂಗಾಳದಲ್ಲಿ ಗೆದ್ದಿದೆ ಎಂಬುದು ವಿರೋಧ ಪಕ್ಷಗಳ ಪ್ರಮುಖ ಆರೋಪ. ಆದರೆ ಅತಿ ಹೆಚ್ಚು ಮತದಾರರ ಹೆಸರುಗಳನ್ನು ತೆಗೆದು ಹಾಕಿದ 20 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿಎಂಸಿ 13 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ, ಬಿಜೆಪಿ ಗೆದ್ದಿರುವುದು ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ. ನಾವೇನಾದರೂ ಮತ ಕಳ್ಳತನ ಮಾಡಿ ಗೆದ್ದಿದ್ದರೆ, ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸೋಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದಕ್ಕೆ ಉದಾಹರಣೆಯಾಗಿ ಮುರ್ಷಿದಾಬಾದ್ನ ಸಂಸೇರ್ಗಂಜ್ ಕ್ಷೇತ್ರದ ಅಂಕಿಅಂಶವನ್ನು ಉಲ್ಲೇಖಿಸಿದ ಅವರು, ವಿಶೇಷ ಪರಿಷ್ಕರಣೆ (SIR) ಬಳಿಕ ಈ ಒಂದೇ ಕ್ಷೇತ್ರದಲ್ಲಿ ಬರೋಬ್ಬರಿ 91,712 ಮತದಾರರ (ಮೂರನೇ ಒಂದಕ್ಕಿಂತ ಹೆಚ್ಚು) ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದು ಬಂಗಾಳದಲ್ಲೇ ಗರಿಷ್ಠ. ಆದರೆ, ಅಲ್ಲಿ ಟಿಎಂಸಿಯ ಮೊಹಮ್ಮದ್ ನೂರ್ ಆಲಂ ಅವರು 61,918 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಗೆದ್ದರು. ಆ ಕಣದಲ್ಲಿ ಬಿಜೆಪಿ ಸ್ಪರ್ಧೆಯಲ್ಲೇ ಇರಲಿಲ್ಲ ಎಂದು ವಿವರಿಸಿದರು.
#WATCH | Delhi: BJP MP Sambit Patra reacts to Indian Express report on 2 ECs objecting to discrepancies in SIR process.
He says, “Look at the situation: if the three Election Commissioners do not communicate with each other, if there is no exchange of views or consultation, and… pic.twitter.com/JLdMuXDiqi
— ANI (@ANI) September 23, 2026
ಆಯೋಗದ ಮೂವರು ಚುನಾವಣಾ ಆಯುಕ್ತರ ನಡುವೆ ಯಾವುದೇ ಸಮಾಲೋಚನೆ ಅಥವಾ ಅಭಿಪ್ರಾಯ ವಿನಿಮಯ ನಡೆಯದೆ, ಪ್ರತಿಯೊಂದಕ್ಕೂ ಅವರು ಸುಮ್ಮನೆ ತಲೆಯಾಡಿಸುತ್ತಿದ್ದರೆ ‘ಇದು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ವಾಧಿಕಾರ’ ಎಂದು ವಿಪಕ್ಷಗಳು ಕರೆಯುತ್ತಿದ್ದವು. ಆದರೆ, ಮಾಧ್ಯಮ ವರದಿಗಳ ಪ್ರಕಾರವೇ ಅವರ ನಡುವೆ 14 ಬಾರಿ ಅಧಿಕೃತ ಪತ್ರವ್ಯವಹಾರಗಳು ಮತ್ತು ಗಂಭೀರ ಚರ್ಚೆಗಳು ನಡೆದಿವೆ. ಇದು ಸರ್ವಾಧಿಕಾರವಲ್ಲ, ಪ್ರಜಾಪ್ರಭುತ್ವದ ಅಸಲಿ ಸೌಂದರ್ಯ. ಎಲ್ಲಾ ಮುಕ್ತ ಚರ್ಚೆಗಳ ನಂತರ, ‘SIR’ ಅಂತಿಮ ಆದೇಶಕ್ಕೆ ಮೂವರೂ ಆಯುಕ್ತರು ಒಮ್ಮತದಿಂದಲೇ ಸಹಿ ಹಾಕಿದ್ದಾರೆ. ಭಾರತದ ಯಾವುದೇ ಸಾಂವಿಧಾನಿಕ ಸಂಸ್ಥೆಯೂ ಸರ್ವಾಧಿಕಾರದಲ್ಲಿಲ್ಲ, ಪೂರ್ಣ ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ದೇಶದ್ರೋಹ ಅಂದರೆ ಏನು? ವಿದೇಶಿ ನೆಲಕ್ಕೆ ಹೋಗಿ ತಮ್ಮದೇ ದೇಶದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಪ್ರಧಾನಮಂತ್ರಿ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಕೀಳಾಗಿ ಕಾಣುವುದೇ ಅಸಲಿ ದೇಶದ್ರೋಹ. ಭಾರತದ ಆಂತರಿಕ ಪ್ರಜಾಪ್ರಭುತ್ವವನ್ನು ಸರಿಪಡಿಸಲು ಮಧ್ಯಪ್ರವೇಶಿಸುವಂತೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳನ್ನು ಕೇಳಲು ರಾಹುಲ್ ಗಾಂಧಿ ಯಾರು? ಇದಕ್ಕಿಂತ ದೊಡ್ಡ ದೇಶದ್ರೋಹದ ಕೃತ್ಯ ಇನ್ನೊಂದಿದೆಯೇ? ದೇಶದ್ರೋಹ ಎಸಗಿದವರಿಗೆ ಬೇರೆಯವರನ್ನು ದೇಶದ್ರೋಹಿ ಎಂದು ಕರೆಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಬಂದಾಗಿನಿಂದ 2023ರವರೆಗೆ ಕೇವಲ ಪ್ರಧಾನಮಂತ್ರಿಗಳ ವೈಯಕ್ತಿಕ ಇಚ್ಛೆಯಂತೆ ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಈಗ ಕಾನೂನು ತಿದ್ದುಪಡಿ ತಂದು, ವಿರೋಧ ಪಕ್ಷದ ನಾಯಕರೂ (LOP) ಸದಸ್ಯರಾಗಿರುವ ಸಮಿತಿಯನ್ನು ರಚಿಸಲಾಗಿದೆ. ಅವರ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುತ್ತಿದೆಎಂದು ಸರ್ಕಾರದ ಸುಧಾರಣೆಯನ್ನು ಉಲ್ಲೇಖಿಸಿದರು.
ವಿವಾದದ ಕೇಂದ್ರವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ 2026ರ ಮೇ 27ರಂದು ಅಂತಿಮ ತೀರ್ಪು ನೀಡಿ, ಇದರ ಕಾನೂನುಬದ್ಧತೆಯನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ. ನಿಮಗೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಅಥವಾ ಇವಿಎಂ ಯಾವುದರ ಮೇಲೂ ನಂಬಿಕೆ ಇಲ್ಲದಿದ್ದರೆ, ಕನಿಷ್ಠ ಜನರ ಮೇಲಾದರೂ ನಂಬಿಕೆ ಇಡಿ. ಮತ ಹಾಕುವವರು ಮತ್ತು ಗೆಲುವು-ಸೋಲನ್ನು ನಿರ್ಧರಿಸುವವರು ಜನಸಾಮಾನ್ಯರೇ. ಹೀಗಾಗಿ ನಾವು ಈ ವಿಚಾರವನ್ನು ಜನರ ನ್ಯಾಯಾಲಯಕ್ಕೇ ಬಿಡುತ್ತಿದ್ದೇವೆ ಎಂದರು.
ಇವರಿಗೆ ಸುಪ್ರೀಂ ಕೋರ್ಟ್ಗೆ ಹೋಗಲು ಯಾರೂ ತಡೆದಿಲ್ಲ, ಈಗಾಗಲೇ ಹೋಗಿದ್ದಾರೆ. ಇನ್ನು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ (Impeachment) ತರುವುದಾದರೆ ಅಥವಾ ಸಂಸತ್ತಿನಲ್ಲಿ ಚರ್ಚಿಸುವುದಾದರೆ, ಕೇವಲ ಒಂದು ಖಾಲಿ ಕಾಗದ ತನ್ನಿ, ನಾನು ಸಹಿ ಹಾಕುತ್ತೇನೆ. ಚಳಿಗಾಲದ ಅಧಿವೇಶನ ಆರಂಭವಾದಾಗ ಇವರು ಸದನವನ್ನು ಒಂದು ದಿನವೂ ನಡೆಯಲು ಬಿಡುವುದಿಲ್ಲ. ಸಂಸತ್ತಿನ ಒಳಗಡೆ ನಿಂತು ಕೇವಲ ಗದ್ದಲ ಎಬ್ಬಿಸಿ, ಘೋಷಣೆ ಕೂಗುವುದಷ್ಟೇ ಇವರ ಕೆಲಸ ಎಂದು ಕಿಡಿಕಾರಿದರು.

