ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿ ಧಾರವಾಡ ಹೈಕೋರ್ಟ್ ಪೀಠ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಪ್ರಶ್ನಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೈಕೋರ್ಟ್ ಆದೇಶದ ವಿರುದ್ಧ ವಿಶೇಷ ಅನುಮತಿ ಅರ್ಜಿ (SLP) ಸಲ್ಲಿಸಲು ಕಾನೂನು ಇಲಾಖೆ ಕೋರಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಹಾಗೂ ಪ್ರಾಸಿಕ್ಯೂಷನ್ ವಿಭಾಗ ಪೂರ್ವಾನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ಈ ಪೂರ್ವಾನುಮತಿಯ ಹಿನ್ನೆಲೆಯಲ್ಲಿ, ಬಹುತೇಕ ನಾಳೆಯೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸುವುದು ಬಹುತೇಕ ಖಚಿತವಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಸರ್ಕಾರ ಮೇಲ್ಮನವಿಗೆ ಮುಂದಾಗಿರುವ ಬಗ್ಗೆ ‘ಪಬ್ಲಿಕ್ ಟಿವಿ’ ಮೊದಲು ಸುದ್ದಿ ಬ್ರೇಕ್ ಮಾಡಿತ್ತು. ಇದನ್ನೂ ಓದಿ: ಎಸ್‌ಐಟಿ ತನಿಖೆಗೆ ಹೈಕೋರ್ಟ್ ನಿರ್ದೇಶನಗಳೇನು?
ಪ್ರಕರಣದ ಹಿನ್ನೆಲೆ ಏನು?
ಕೆಪಿಎಸ್‌ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕೆಂದು ಕೋರಿ ದೂರುದಾರ ಮಂಜುನಾಥ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠವು ಸೋಮವಾರ (ಸೆ.21) ಮಹತ್ವದ ಆದೇಶ ಹೊರಡಿಸಿತ್ತು. ಸಿಬಿಐಗೆ ವಹಿಸುವ ಬದಲು ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶಿಸಿತ್ತು.
ಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೋಕ್ಸಿ ಹಾಗೂ ಕ್ಷಮಾ ಮಿಶ್ರಾ ಅವರನ್ನೊಳಗೊಂಡ 5 ಸದಸ್ಯರ ಸಮಿತಿಯನ್ನು ರಚಿಸಿತ್ತು.
ಪ್ರಕರಣವನ್ನು ಪ್ರಸ್ತುತ ತನಿಖೆ ನಡೆಸುತ್ತಿರುವ ಸಿಐಡಿ (CID), ಒಂದು ವಾರದೊಳಗೆ ಎಲ್ಲಾ ದಾಖಲೆಗಳು ಹಾಗೂ ತನಿಖಾ ಮಾಹಿತಿಯನ್ನು ನೂತನ ಎಸ್‌ಐಟಿಗೆ ಹಸ್ತಾಂತರಿಸಬೇಕು. ಎಸ್‌ಐಟಿ ತಂಡವು 100 ದಿನಗಳ ಒಳಗೆ ಸಮಗ್ರ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.
ಹೈಕೋರ್ಟ್ ನಿಗದಿಪಡಿಸಿರುವ 17 ಕಠಿಣ ಮಾರ್ಗಸೂಚಿಗಳ ಅನ್ವಯವೇ ತನಿಖೆ ನಡೆಯಬೇಕು ಹಾಗೂ ಪ್ರತಿ 30 ದಿನಗಳಿಗೊಮ್ಮೆ ತನಿಖೆಯ ಪ್ರಗತಿ ವರದಿಯನ್ನು ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಿ ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಜನವರಿ 17ಕ್ಕೆ ಮುಂದೂಡಿತ್ತು.

