ಬೆಂಗಳೂರು: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣದಲ್ಲಿ ಕ್ಷಮೆಯಾಚಿಸಿದ ಬೆನ್ನಲ್ಲೇ ಶಾಸಕ ಸುರೇಶ್ ಗೌಡ (B Suresh Gowda) ಪುತ್ರಿ ಐಶ್ವರ್ಯಾಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ
ಪಿಎಸ್‌ಐ ಬಳಿ ಕ್ಷಮೆ ಕೇಳಿದರೆ ನಿರೀಕ್ಷಣಾ ಜಾಮೀನು ನೀಡಲು ಪರಿಗಣನೆ ಮಾಡಲಾಗುವುದು ಎಂದು ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ನಿನ್ನೆ ಐಶ್ವರ್ಯಾ ಅವರು ಕ್ಷಮೆಯಾಚಿಸಿದ್ದರು.
ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ ಸಂಬಂಧ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯ ಪಿಎಸ್‌ಐ ಸವಿತಾ ಪಾಟೀಲ್‌ಗೆ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಬರದ ಬಗ್ಗೆ ಚರ್ಚೆಗೆ ಸಚಿವರ ʻಬರʼ; ಕಾಂಗ್ರೆಸ್ – ಬಿಜೆಪಿ ಮಧ್ಯೆ ತೀವ್ರ ಜಟಾಪಟಿ
‘ಆಗಸ್ಟ್ 12ರಂದು ಭೀಮನ ಅಮಾವಾಸ್ಯೆಯಂದು ನಾನು ಮತ್ತು ನನ್ನ ಇಬ್ಬರು ಮಕ್ಕಳು ಪಾಂಡವಪುರದ ಉಕ್ಕಡಮ್ಮ ದೇವಸ್ಥಾನಕ್ಕೆ ತೆರಳಿದ್ದೆವು. ಅಂದು ದೇಗುಲದಲ್ಲಿ ಹೆಚ್ಚು ಜನಸಂದಣಿ ಇದ್ದಿದ್ದರಿಂದ ಹಾಗೂ ನನ್ನ ಮಕ್ಕಳಿಗೆ `ಅಮ್ಮ’ ಆಗಿದ್ದ ಕಾರಣ ದೇವರ ದರ್ಶನ ಪಡೆಯುವ ಸಂದರ್ಭದಲ್ಲಿ ನನ್ನ ಮತ್ತು ಮಹಿಳಾ ಪಿಎಸ್‌ಐ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು. ಉದ್ವೇಗದಿಂದ ಅಹಿತಕರ ಘಟನೆ ನಡೆದಿದೆ. ಈ ಘಟನೆ ನಡೆಯಬಾರದಿತ್ತು. ಈ ಘಟನೆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈ ಘಟನೆಯಿಂದ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ನೋವಾಗಿದ್ದರೆ, ಬೇಷರತ್ ಆಗಿ ಕ್ಷಮೆ ಯಾಚಿಸುತ್ತೇನೆ’ ಎಂದು ವಿಡಿಯೋ ಮೂಲಕ ಐಶ್ವರ್ಯ ಕ್ಷಮೆಯಾಚಿಸಿದ್ದಾರೆ.

