ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ತಾನದ(Pakistan) ಪ್ರಮುಖ ಸ್ನೇಹಿತ ಟರ್ಕಿ(Turkey) ಭಾರತದಿಂದ ಭಾರೀ ಪ್ರಮಾಣದಲ್ಲಿ ಡೀಸೆಲ್ ಆಮದು ಮಾಡಿಕೊಳ್ಳಲು ಆರಂಭಿಸಿದೆ.
2026ರ ಆಗಸ್ಟ್‌ನಲ್ಲಿ ಟರ್ಕಿ ಭಾರತದಿಂದ(India) ದಾಖಲೆ ಪ್ರಮಾಣದ ಡೀಸೆಲ್ ಆಮದು(Import) ಮಾಡಿಕೊಂಡಿದ್ದು, ಇದು ವರ್ಷಗಳಲ್ಲೇ ನಡೆದ ಅತ್ಯಧಿಕ ಖರೀದಿಯಾಗಿದೆ.
ರಷ್ಯಾದ(Russia) ಪೂರೈಕೆ ಕುಸಿಯುತ್ತಿರುವ ಮತ್ತು ಮಧ್ಯಪ್ರಾಚ್ಯದ ಸಾರಿಗೆ ಮಾರ್ಗಗಳು ಅಡೆತಡೆ ಎದುರಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ರೆಸೆಪ್ ತಯ್ಯಿಪ್ ಎರ್ಡೋಗನ್ ನೇತೃತ್ವದ ಟರ್ಕಿಗೆ ಭಾರತವು ಅತ್ಯಂತ ಮಹತ್ವದ ಪರ್ಯಾಯ ಇಂಧನ ಪೂರೈಕೆದಾರನಾಗಿ ಹೊರಹೊಮ್ಮಿದೆ.
ಆಗಸ್ಟ್ ತಿಂಗಳಲ್ಲಿ ಟರ್ಕಿ ಭಾರತದಿಂದ ಆಮದು ಮಾಡಿಕೊಂಡ ಡೀಸೆಲ್ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿದ್ದರೆ, ರಷ್ಯಾದ ಪೂರೈಕೆ ತೀವ್ರವಾಗಿ ಕುಸಿದಿದೆ.

ಕಮಾಡಿಟಿ ದತ್ತಾಂಶ ಸಂಸ್ಥೆ Kpler ಪ್ರಕಾರ, ಟರ್ಕಿ ಆಗಸ್ಟ್‌ನಲ್ಲಿ ಭಾರತದಿಂದ ಪ್ರತಿದಿನ 1,20,000 ಬ್ಯಾರೆಲ್‌ಗಳಿಗೂ (bpd – barrels per day) ಹೆಚ್ಚು ಡೀಸೆಲ್ ಆಮದು ಮಾಡಿಕೊಂಡಿದ್ದು, ಅಮೆರಿಕದಿಂದ ಸುಮಾರು 90,000 bpd ಆಮದು ಮಾಡಿಕೊಂಡಿದೆ. ಅದೇ ಸಮಯದಲ್ಲಿ, ಟರ್ಕಿಯ ರಷ್ಯನ್ ಡೀಸೆಲ್ ಆಮದು ಈ ವರ್ಷದ ಹಿಂದಿನ ತಿಂಗಳುಗಳಲ್ಲಿದ್ದ 2,00,000 bpd ಗಿಂತಲೂ ಹೆಚ್ಚು ಮಟ್ಟದಿಂದ ಆಗಸ್ಟ್‌ನಲ್ಲಿ ಸುಮಾರು 80,000 bpd ಗೆ ಕುಸಿದಿದೆ.
ಉಕ್ರೇನ್(Ukraine) ದಾಳಿಯಿಂದ ತನ್ನ ಸಂಸ್ಕರಣಾಗಾರಗಳು ಮತ್ತು ದೇಶೀಯ ಇಂಧನ ಪೂರೈಕೆಗೆ ಅಡ್ಡಿಯಾದ ನಂತರ ರಷ್ಯಾ ಡೀಸೆಲ್ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಜತೆಗೆ ಮಧ್ಯಪ್ರಾಚ್ಯದ ಸಂಸ್ಕರಣಾಗಾರಗಳಿಗೆ ಯುದ್ಧದಿಂದಾದ ಹಾನಿ ಮತ್ತು ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗಣೆಗೆ ಉಂಟಾದ ಅಡಚಣೆಗಳು ಮಾರುಕಟ್ಟೆಯನ್ನು ಇನ್ನಷ್ಟು ಬಿಗಿಗೊಳಿಸಿವೆ.
ಐತಿಹಾಸಿಕವಾಗಿ ರಷ್ಯಾ ಟರ್ಕಿಯ ಡೀಸೆಲ್ ಪೂರೈಕೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಟರ್ಕಿಯ ಎನರ್ಜಿ ಮಾರ್ಕೆಟ್ ರೆಗ್ಯುಲೇಟರಿ ಅಥಾರಿಟಿ (EMRA) ದತ್ತಾಂಶದ ಪ್ರಕಾರ, 2025ರಲ್ಲಿ ಟರ್ಕಿಯ ಒಟ್ಟು ಡೀಸೆಲ್ ಆಮದಿನಲ್ಲಿ ರಷ್ಯಾದ ಪಾಲು ಸುಮಾರು 85% ಆಗಿದ್ದು, ದಿನಕ್ಕೆ ಸುಮಾರು 281,000 ಬ್ಯಾರೆಲ್‌ಗಳನ್ನು ಪೂರೈಸುತ್ತಿತ್ತು. ಇದನ್ನೂ ಓದಿ: ಪಾಕ್ ಬೆಂಬಲಿಸಿದ ಟರ್ಕಿಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತ

ಉಕ್ರೇನ್‌ನ ಡ್ರೋನ್ ದಾಳಿಗಳು ರಷ್ಯಾದ ಸಂಸ್ಕರಣಾಗಾರಗಳು ಮತ್ತು ದೇಶೀಯ ಇಂಧನ ಲಭ್ಯತೆಗೆ ಧಕ್ಕೆ ತಂದ ನಂತರ, ರಷ್ಯಾ ಡೀಸೆಲ್ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಟರ್ಕಿಯ ರಷ್ಯನ್ ಡೀಸೆಲ್ ಆಮದು ಜುಲೈನಲ್ಲಿ ಸುಮಾರು 100,000 bpd ಮತ್ತು ಆಗಸ್ಟ್‌ನಲ್ಲಿ ಸುಮಾರು 80,000 bpd ಗೆ ಇಳಿಕೆಯಾಗಿದ್ದು, ಆಗಸ್ಟ್‌ನಲ್ಲಿ ಟರ್ಕಿಯ ಡೀಸೆಲ್ ಆಮದಿನಲ್ಲಿ ರಷ್ಯಾದ ಪಾಲನ್ನು ಕೇವಲ 20%ಕ್ಕೆ ಇಳಿಕೆಯಾಗಿದೆ.
2025ರಲ್ಲಿ ಭಾರತವು ಟರ್ಕಿಗೆ 562,421 ಟನ್ ಡೀಸೆಲ್ ರಫ್ತು ಮಾಡಿದ್ದು, ರಷ್ಯಾ ಮತ್ತು ಈಜಿಪ್ಟ್ ನಂತರ ಟರ್ಕಿಯ ಮೂರನೇ ಅತಿದೊಡ್ಡ ಪೂರೈಕೆದಾರನಾಗಿತ್ತು. 2023ರಲ್ಲಿ ಭಾರತದ ಡೀಸೆಲ್ ರಫ್ತು 3,97,761 ಟನ್‌ಗಳಷ್ಟಿದ್ದರೆ, 2022ರಲ್ಲಿ 3,30,990 ಟನ್‌ಗಳಷ್ಟಿತ್ತು.
ಭಾರತವು ತನ್ನ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆಯಾದರೂ, ವಿಶದಲ್ಲಿ ಅತಿ ಹೆಚ್ಚು ತೈಲ ಸಂಸ್ಕರಣೆ ಮಾಡುವ ದೇಶಗಳ ಪೈಕಿ ಮೂರನೇ ಸ್ಥಾನವನ್ನು ಹೊಂದಿದೆ. ಇದು ಭಾರತೀಯ ಸಂಸ್ಕರಣಾಗಾರರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಚ್ಚಾ ತೈಲವನ್ನು ಖರೀದಿಸಲು, ಅದನ್ನು ಡೀಸೆಲ್ ಮತ್ತು ಪೆಟ್ರೋಲ್‌ನಂತಹ ಹೆಚ್ಚಿನ ಮೌಲ್ಯದ ಉತ್ಪನ್ನಗಳಾಗಿ ಸಂಸ್ಕರಿಸಲು ಮತ್ತು ಬೆಲೆ ಹಾಗೂ ಕೊರತೆಯಿಂದಾಗಿ ಲಾಭದಾಯಕವಾಗಿರುವ ಮಾರುಕಟ್ಟೆಗಳಿಗೆ ಆ ಉತ್ಪನ್ನಗಳನ್ನು ರಫ್ತು ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಕಾಶ್ಮೀರದಿಂದ ಕರಬಖ್‌ವರೆಗೆ; ಟರ್ಕಿ & ಅಜೆರ್ಬೈಜಾನ್ ಯಾವಾಗಲೂ ಭಾರತದ ವಿರುದ್ಧ ನಿಲ್ಲೋದ್ಯಾಕೆ?
ಟರ್ಕಿ ಪಾಕಿಸ್ತಾನದ ಅತ್ಯಂತ ಆಪ್ತ ವ್ಯೂಹಾತ್ಮಕ ಪಾಲುದಾರನಾಗಿ ಗುರುತಿಸಿಕೊಂಡಿದೆ. 2025ರ ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಇಸ್ಲಾಮಾಬಾದ್‌ಗೆ ಪ್ರಬಲ ಬೆಂಬಲ ನೀಡಿತ್ತು.

