– ಚಾಲಕನ ವಿರುದ್ಧ ಎಫ್ಐಆರ್ ದಾಖಲು
ಮುಂಬೈ: ಸೇತುವೆಯ ತಡೆಗೋಡೆಗೆ ಕ್ಯಾಬ್ (Cab) ಡಿಕ್ಕಿಯಾಗಿ (Accident) ಅದರಲ್ಲಿದ್ದ ಇಂಡಿಗೋ (IndiGo) ಕ್ಯಾಬಿನ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಕೈನೂರ್ ಮಿಸ್ತ್ರಿ (32) ಸಾವನ್ನಪ್ಪಿದ ದುರ್ದೈವಿ. ಸೆ.18 ರಂದು ಕೆಲಸ ಮುಗಿಸಿ ಕಂಪನಿ ಒದಗಿಸಿದ್ದ ಕ್ಯಾಬ್ನಲ್ಲಿ ಅವರು ಮನೆಗೆ ಮರಳುತ್ತಿದ್ದರು. ಆಗ ಕಾರು ಬೊರಿವಲಿ ಪೂರ್ವದ ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿರುವ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಮಿಸ್ತ್ರಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಡಿವೈಡರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ನರರೋಗ ತಜ್ಞ ಸಜೀವ ದಹನ
ಇಂಡಿಗೋ ತಮ್ಮ ಉದ್ಯೋಗಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ‘ಮಯೂರೇಶ್ ಟೂರ್ ಅಂಡ್ ಟ್ರಾವೆಲ್ಸ್’ಗೆ ಗುತ್ತಿಗೆ ನೀಡಿತ್ತು. ಈ ಅಪಘಾತದ ಬಳಿಕ ಸಾರಿಗೆ ಸೌಲಭ್ಯಗಳ ಸುರಕ್ಷತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಪೊಲೀಸರು ಕ್ಯಾಬ್ ಚಾಲಕ ವಿಜಯ್ ಖೋಸೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರಂಭದಲ್ಲಿ, ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಮತ್ತು ಜೀವಕ್ಕೆ ಅಪಾಯವನ್ನುಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಕೈನೂರ್ ಮಿಸ್ತ್ರಿ ಮರಣದ ನಂತರ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106(1) ರ ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಗಾಗಿ ಪೊಲೀಸರು ಚಾಲಕನಿಗೆ ನೋಟಿಸ್ ಕೂಡ ಜಾರಿಗೊಳಿಸಿದ್ದಾರೆ.
ಮುಂಬೈನ ಮೀರಾ ರಸ್ತೆ ನಿವಾಸಿಯಾಗಿದ್ದ ಕೈನೂರ್ ಮಿಸ್ತ್ರಿಯವರಿಗೆ ಎಂಟು ವರ್ಷದ ಮಗ ಇದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ BMW ಕಾರು – ಮೂವರು ದುರ್ಮರಣ

