ಮಡಿಕೇರಿ: ಕೊಡಗಿನ (Kodagu) ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ (Dubare Elephant Camp) ಐದು ತಿಂಗಳ ಬಳಿಕ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಆನೆಗಳ ಕಾಳಗದಲ್ಲಿ ಪ್ರವಾಸಿ ಮಹಿಳೆ ಮೃತಪಟ್ಟ ಬಳಿಕ ಶಿಬಿರ ಬಂದ್ ಆಗಿತ್ತು. ಇದೀಗ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳೊಂದಿಗೆ ಮತ್ತೆ ತೆರೆಯಲಾಗಿದೆ.
ಐದು ತಿಂಗಳ ಬಳಿಕ ಮತ್ತೆ ಪ್ರವಾಸಿಗರ ಕಲರವಕ್ಕೆ ದುಬಾರೆ ಸಾಕಾನೆ ಶಿಬಿರ ಸಾಕ್ಷಿಯಾಗಿದೆ. ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಸದ್ಯ ಪ್ರತಿದಿನ ಬೆಳಿಗ್ಗೆ 9:30 ರಿಂದ 11:30ರ ವರೆಗೆ ಮಾತ್ರ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. 45 ನಿಮಿಷದ ಅವಧಿಗೆ ಗರಿಷ್ಠ 150 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗಿದೆ. 25 ಮಂದಿಯಂತೆ ತಂಡಗಳನ್ನು ರಚಿಸಿ, ಮಾರ್ಗದರ್ಶಕರ ಜೊತೆಗೆ ಶಿಬಿರ ವೀಕ್ಷಣೆಗೆ ಕರೆದೊಯ್ಯಲಾಗುತ್ತದೆ. ಇದನ್ನೂ ಓದಿ: ದುಬಾರೆಯಲ್ಲಿ ದುರಂತ – ಮಾರ್ತಾಂಡನ ಜೊತೆ ಕಂಜನ್ ಕಾದಾಟಕ್ಕೆ ಪ್ರವಾಸಿ ಮಹಿಳೆ ಬಲಿ

ಆನೆಗಳಿಂದ ಸುಮಾರು 10 ಮೀಟರ್ ಅಂತರದಲ್ಲಿದ್ದುಕೊಂಡೇ ಪ್ರವಾಸಿಗರು ಆನೆಗಳನ್ನು ವೀಕ್ಷಿಸಬೇಕಿದೆ. ಆನೆಗಳ ಸುರಕ್ಷತೆ ಜೊತೆಗೆ ಪ್ರವಾಸಿಗರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಆನೆಗಳನ್ನು ಮುಟ್ಟುವುದಕ್ಕೆ, ಆಹಾರ ತಿನ್ನಿಸುವುದಕ್ಕೆ ಹಾಗೂ ಸ್ನಾನ ಮಾಡಿಸುವುದಕ್ಕೆ ಅವಕಾಶವಿಲ್ಲ. ಆನೆ ಮತ್ತು ಪ್ರವಾಸಿಗರ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ಪ್ರವೇಶ ದರದಲ್ಲೂ ಬದಲಾವಣೆ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 140 ರೂ. ಹಾಗೂ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ 160 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಶಿಬಿರದಲ್ಲಿರುವ ಒಟ್ಟು 30 ಆನೆಗಳ ಪೈಕಿ ಸದ್ಯ 10 ಆನೆಗಳನ್ನು ಮಾತ್ರ ಪ್ರವಾಸಿಗರು ವೀಕ್ಷಿಸಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಆನೆ ಶಿಬಿರಗಳಿಗಾಗಿ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅನುಷ್ಠಾನಗೊಳಿಸಿ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಇತರೆ ಅವಧಿಗಳಲ್ಲೂ ಶಿಬಿರದ ಕಾರ್ಯಾಚರಣೆಯನ್ನು ವಿಸ್ತರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಶಿಬಿರ ಬಂದ್ ಆಗಿದ್ದು ಯಾಕೆ?
ಇದೇ ವರ್ಷ ಜೂನ್ 1ರಂದು ಕಂಜನ್ ಮತ್ತು ಮಾರ್ತಾಂಡ ಎಂಬ ಸಾಕಾನೆಗಳ ನಡುವೆ ಕಾಳಗ ನಡೆದಿತ್ತು. ಈ ವೇಳೆ ಆನೆಗಳ ನಡುವೆ ಸಿಲುಕಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆ ಮೃತಪಟ್ಟಿದ್ದರು. ಕಾಳಗದಲ್ಲಿ ಗಾಯಗೊಂಡಿದ್ದ ಸಾಕಾನೆಯೂ ಬಳಿಕ ಮೃತಪಟ್ಟಿತ್ತು. ಈ ದುರ್ಘಟನೆಯ ಬಳಿಕ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದುಬಾರೆ ಸಾಕಾನೆ ಶಿಬಿರವನ್ನು ಬಂದ್ ಮಾಡಲಾಗಿತ್ತು. ಇದೀಗ ಐದು ತಿಂಗಳ ಬಳಿಕ ಮತ್ತೆ ಶಿಬಿರ ಪ್ರವಾಸಿಗರಿಗೆ ಮುಕ್ತವಾಗಿದೆ. ಆದರೆ ಈ ಬಾರಿ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪ್ರವಾಸಿಗರಿಗೆ ಆನೆಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಪರಿಶೀಲಿಸಿ ಪ್ರವಾಸಿಗರ ವೀಕ್ಷಣೆಯ ಅವಧಿಯನ್ನು ವಿಸ್ತರಿಸುವ ಕುರಿತು ಅರಣ್ಯ ಇಲಾಖೆ ನಿರ್ಧರಿಸಲಿದೆ. ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾಳಗ – ದಾಳಿ ಮಾಡಿದ್ದ ಕಂಜನ್ ಆನೆಗೆ ದಸರಾದಿಂದ ಕೊಕ್
ದುಬಾರೆ ಸಾಕಾನೆ ಶಿಬಿರ – ಪ್ರಮುಖ ಮಾಹಿತಿ
ವೀಕ್ಷಣ ಸಮಯ: ಬೆಳಿಗ್ಗೆ 9:30 ರಿಂದ 11:30
45 ನಿಮಿಷಕ್ಕೆ: 150 ಪ್ರವಾಸಿಗರು
ಒಂದು ತಂಡದಲ್ಲಿ: 25 ಮಂದಿ
ಆನೆಗಳಿಂದ ಅಂತರ: ಸುಮಾರು 10 ಮೀಟರ್
ಸಾಮಾನ್ಯ ದಿನದ ಶುಲ್ಕ: 140 ರೂ.
ವಾರಾಂತ್ಯ/ರಜಾ ದಿನ: 160 ರೂ.
ಶಿಬಿರದಲ್ಲಿರುವ ಆನೆಗಳು: 30
ಪ್ರವಾಸಿಗರ ವೀಕ್ಷಣೆಗೆ: 10 ಆನೆಗಳು ಲಭ್ಯ.

