ಮುಂಬೈ: ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರೊಂದು (BMW Car) ನಿಯಂತ್ರಣ ತಪ್ಪಿ ಸೇತುವೆಯೊಂದರ ಮೇಲಿನಿಂದ ಕೆಳಗೆ ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನ (Mumbai) ಕೋಸ್ಟಲ್ ರೋಡ್ನಲ್ಲಿ (Coastal Road) ಭಾನುವಾರ ಮುಂಜಾನೆ ಸಂಭವಿಸಿದೆ.
ಕಪ್ಪು ಬಣ್ಣದ ಕಾರು ಮರೈನ್ ಡ್ರೈವ್ನಿಂದ ಹಾಜಿ ಅಲಿ ಕಡೆಗೆ ಕೋಸ್ಟಲ್ ರೋಡ್ನಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವೇಗವಾಗಿ ಬಂದ ಕಾರು ಮೊದಲು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ಸೇತುವೆಯಿಂದ ಕೆಳಗೆ ಬಿದ್ದಿದೆ. ಅಪಘಾತದ ಬಳಿಕ ಕಾರಿನಲ್ಲಿದ್ದ ನಾಲ್ವರನ್ನು ಮುಂಬೈನ ನಾಯರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೂವರು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ
ಮೃತರನ್ನು 21 ವರ್ಷದ ಶನಾಯ್ ಗಜ್ಜಲ್ ಮತ್ತು 17 ವರ್ಷದ ಧಿರ್ಯಾ ಸೇಠ್ ಎಂದು ಗುರುತಿಸಲಾಗಿದೆ. ಮೃತಪಟ್ಟಿರುವ ಮೂರನೇ ವ್ಯಕ್ತಿ 25 ವರ್ಷದ ಪುರುಷನಾಗಿದ್ದು, ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನೊಬ್ಬ 20 ವರ್ಷದ ಅಪರಿಚಿತ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯ ಟ್ರಾಮಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರಚೋದನಕಾರಿ ಭಾಷಣ ಆರೋಪ – ಪ್ರತಾಪ್ ಸಿಂಹ ವಿರುದ್ಧ FIR ದಾಖಲು
ಅಪಘಾತದ ಕುರಿತು ಕೋಸ್ಟಲ್ ರೋಡ್ ಕಂಟ್ರೋಲ್ ರೂಮ್ಗೆ ಭಾನುವಾರ ಬೆಳಗ್ಗೆ ಸುಮಾರು 5:20ಕ್ಕೆ ಮಾಹಿತಿ ಲಭ್ಯವಾಗಿತ್ತು. ಅಪಘಾತದ ತೀವ್ರತೆ ಕಾರಿಗೆ ಉಂಟಾಗಿರುವ ಹಾನಿಯಿಂದಲೇ ತಿಳಿದುಬಂದಿದೆ. ಘಟನೆಯಿಂದ ಕಾರಿನ ಮೇಲ್ಛಾವಣಿ ಒಳಭಾಗಕ್ಕೆ ಕುಸಿದಿದ್ದು, ವಿಂಡ್ಶೀಲ್ಡ್ ತುಂಡುಗಳಾಗಿ ಒಡೆದಿದೆ. ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಂಪರ್ ಕಿತ್ತುಹೋಗಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂಭಾಗ ಐಷಾರಾಮಿ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಅಪಘಾತಕ್ಕೆ ನಿಖರವಾಗಿ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ 3 ವರ್ಷದ ಮಗು ಬಲಿ

