ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ರೂಪಿಸಿ ಅನುಷ್ಠಾನಗೊಳಿಸುವಂತೆ ಕೋರಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸುಳ್ಯ ಕ್ಷೇತ್ರವು ಕೃಷಿ ಪ್ರಧಾನ ಹಾಗೂ ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶವಾಗಿದ್ದು, ಕೃಷಿ, ಯುವಜನತೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯ ಹೊಂದಿದೆ. ಆದರೆ ಮಳೆಗಾಲದ ರಸ್ತೆ ಹಾನಿ, ವನ್ಯಜೀವಿ-ಮಾನವ ಸಂಘರ್ಷ, ಕೃಷಿ ಉತ್ಪನ್ನಗಳಿಗೆ ಸಮರ್ಪಕ ಮಾರುಕಟ್ಟೆ ಕೊರತೆ, ಉದ್ಯೋಗಕ್ಕಾಗಿ ಯುವಕರ ವಲಸೆ ಹಾಗೂ ಗ್ರಾಮೀಣ ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ‘ಅಭಿವೃದ್ಧಿ – ಯುವಜನತೆ – ಕೃಷಿ – ಶಿಕ್ಷಣ – ಉದ್ಯೋಗ – ಮೂಲಸೌಕರ್ಯ’ ಎಂಬ 6 ಪ್ರಮುಖ ಆದ್ಯತೆಗಳೊಂದಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿದ್ದಾರೆ.
ಗ್ರಾಮೀಣ ರಸ್ತೆಗಳ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟ ಸುಧಾರಣೆಗೆ ವಿಶೇಷ ಅನುದಾನ ನೀಡಬೇಕು, ಮಳೆಗಾಲದಲ್ಲಿ ಪದೇಪದೇ ಹಾನಿಗೊಳಗಾಗುವ ರಸ್ತೆಗಳು, ಸೇತುವೆಗಳು ಮತ್ತು ಚರಂಡಿಗಳಿಗೆ ತಾತ್ಕಾಲಿಕ ದುರಸ್ತಿ ಬದಲಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಗುಡ್ಡ ಪ್ರದೇಶಗಳಲ್ಲಿ ರಸ್ತೆ ಕುಸಿತ ಮತ್ತು ಭೂಕುಸಿತ ತಡೆಯಲು ವೈಜ್ಞಾನಿಕ ತಂತ್ರಜ್ಞಾನ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಅಡಿಕೆ, ರಬ್ಬರ್, ತೆಂಗು, ಕೊಕ್ಕೋ, ಕಾಳುಮೆಣಸು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು, ಶೀತಗೃಹ ಹಾಗೂ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಆನೆ ಸೇರಿದಂತೆ ವನ್ಯಜೀವಿಗಳಿಂದ ಉಂಟಾಗುತ್ತಿರುವ ಬೆಳೆ ಹಾನಿ ತಡೆಯಲು ಸೌರ ಬೇಲಿ ಹಾಗೂ ರೈಲು ಬ್ಯಾರಿಕೇಡ್ಗಳಂತಹ ವೈಜ್ಞಾನಿಕ ವನ್ಯಜೀವಿ ತಡೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಣ್ಣ ನೀರಾವರಿ ಹಾಗೂ ಲಿಫ್ಟ್ ಇರಿಗೇಶನ್ ಯೋಜನೆಗಳನ್ನು ವಿಸ್ತರಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ (Smart Class) ಹಾಗೂ ಡಿಜಿಟಲ್ ಲರ್ನಿಂಗ್ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಸರ್ಕಾರಿ ಕಾಲೇಜುಗಳಲ್ಲಿ ಉದ್ಯೋಗಮುಖಿ ಕೌಶಲ್ಯಾಧಾರಿತ ಕೋರ್ಸ್ಗಳನ್ನು ಆರಂಭಿಸುವುದು ಮತ್ತು ಸುಳ್ಯದಲ್ಲಿ ‘ಕ್ಯಾರಿಯರ್ ಗೈಡೆನ್ಸ್ & ಕೌನ್ಸೆಲಿಂಗ್ ಸೆಂಟರ್’ ಸ್ಥಾಪಿಸಬೇಕು ಎಂದು ವಿನಂತಿಸಿದ್ದಾರೆ.
ಸ್ಥಳೀಯರ ವಲಸೆ ತಡೆಯಲು ಐಟಿ (IT), ಹೆಲ್ತ್ಕೇರ್, ಬ್ಯಾಂಕಿಂಗ್, ಪ್ರವಾಸೋದ್ಯಮ ತರಬೇತಿ ಕೇಂದ್ರಗಳ ಮೂಲಕ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಅವಕಾಶಗಳನ್ನು ಸೃಷ್ಟಿಸಬೇಕು. ಕೈಗಾರಿಕೆಗಳ ಸಹಯೋಗದೊಂದಿಗೆ ನಿಯಮಿತ ಉದ್ಯೋಗ ಮೇಳಗಳನ್ನು ಆಯೋಜಿಸುವುದು ಹಾಗೂ ಸ್ವಯಂ ಉದ್ಯೋಗ ಮತ್ತು ಸ್ಟಾರ್ಟ್ಅಪ್ಗಳಿಗೆ ಸಾಲ-ಸಬ್ಸಿಡಿ ಸೌಲಭ್ಯ ಕಲ್ಪಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ವೈದ್ಯಕೀಯ ಘಟಕಗಳನ್ನು ಒದಗಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರು ಹಾಗೂ ಔಷಧಿ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ದೊಡ್ಡ ಆಸ್ಪತ್ರೆಗಳಿಗೆ ಸಾಗಿಸಲು ಅಂಬುಲೆನ್ಸ್ ಸಂಪರ್ಕವನ್ನು ಬಲಪಡಿಸಬೇಕು. ಸುಳ್ಯ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಹಾಗೂ ನಿರಂತರ ಕುಡಿಯುವ ನೀರು ದೊರೆಯುವಂತೆ ಸಮಗ್ರ ಯೋಜನೆ ರೂಪಿಸಬೇಕು, ಬಾಕಿ ಇರುವ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವುದು, ಹಳೆಯ ಪೈಪ್ಲೈನ್ಗಳನ್ನು ಬದಲಾಯಿಸುವುದು ಹಾಗೂ ಮಳೆನೀರು ಸಂಗ್ರಹಣೆ ಮತ್ತು ಸಣ್ಣ ಕೆರೆ-ಕಟ್ಟೆಗಳ ಪುನಶ್ಚೇತನಕ್ಕೆ ವಿಶೇಷ ಯೋಜನೆ ರೂಪಿಸಬೇಕು, ಪಶ್ಚಿಮ ಘಟ್ಟದ ನೈಸರ್ಗಿಕ ಸೌಂದರ್ಯ, ಜಲಪಾತಗಳು ಮತ್ತು ಧಾರ್ಮಿಕ ತಾಣಗಳನ್ನು ಒಟ್ಟುಗೂಡಿಸಿ ‘ಇಕೋ-ಟೂರಿಸಂ ಸರ್ಕ್ಯೂಟ್’ ರೂಪಿಸುವುದರ ಮೂಲಕ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಎಲ್ಲಾ ಕ್ಷೇತ್ರಗಳನ್ನು ಪ್ರತ್ಯೇಕವಾಗಿ ನೋಡದೆ ʼಸಮಗ್ರ ಸುಳ್ಯ ಅಭಿವೃದ್ಧಿ ಯೋಜನೆ – Integrated Sulya Development Planʼ ಎಂಬ ಬೃಹತ್ ಯೋಜನೆಯನ್ನು ಸರ್ಕಾರದ ಮಟ್ಟದಲ್ಲಿ ರೂಪಿಸಿ, ಮುಂದಿನ 3 ರಿಂದ 5 ವರ್ಷಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಅಗತ್ಯ ಅನುದಾನ ಹಾಗೂ ಆಡಳಿತಾತ್ಮಕ ಅನುಮೋದನೆ ನೀಡಬೇಕೆಂದು ಕೀರ್ತನ್ ಗೌಡ ಕೊಡಪಾಲ ವಿನಂತಿಸುವುದರ ಜೊತೆಗೆ ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಎನ್ಎಸ್ಯುಐ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲರಿಂದ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

