ಕವಲುದಾರಿ ಮುಂತಾದ ಭಿನ್ನ ಕಥಾನಕಗಳ ಮೂಲಕ ನಾಯಕನಾಗಿ ನೆಲೆಗೊಂಡಿರುವವರು ರಿಷಿ. ಅವರು ನಾಯಕನಾಗಿ ನಟಿಸಲಿರುವ ಹೊಸಾ ಸಿನಿಮಾವೊಂದರ ತಯಾರಿಯೀಗ ಭರ್ಜರಿಯಾಗಿಯೇ ನಡೆಯುತ್ತಿದೆ.
ಈಗಾಗಲೇ ಕನ್ನಡದಲ್ಲಿ ಸ್ಟಾಲ್ಕರ್ ಅಂತೊಂದು ಚಿತ್ರವನ್ನು ನಿರ್ದೆಶನ ಮಾಡಿದ್ದ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಪರಳಗಿಕೊಂಡಿರುವ ಕಿಶೋರ್ ಭಾರ್ಗವ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ. ವಿಶೇಷವೆಂದರೆ, ಮರಾಠಿ ಸೂಪರ್ ಸ್ಟಾರ್ ಉಪೇಂದ್ರ ಲಿಮಾಯೆ(Upendra Limaye) ಈ ಸಿನಿಮಾದ ವಿಶಿಷ್ಟ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ʻರಾಮಾಯಣʼ – ಇಂಗ್ಲಿಷ್ ಆವೃತ್ತಿಯಲ್ಲಿ 30 ನಿಮಿಷಕ್ಕೆ ಕತ್ತರಿ; ಹಾಡುಗಳು ಸಂಪೂರ್ಣ ನಿಷಿದ್ಧ!
ಹಂಗೇಸ್ ಸಾಯಿ ವಿಷನ್ಸ್ ಬ್ಯಾನರ್ನಡಿಯಲ್ಲಿ ವಸಂತ್ ಹಂಗೆ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಸಂಭಾಷಣೆ, ಸಾಹಿತ್ಯ ಮತ್ತು ಸಂಕಲನದ ಹೊಣೆಯನ್ನು ಸೋಮಶೇಖರ ವಹಿಸಿಕೊಂಡಿದ್ದಾರೆ. ಅನಂತ ಭಾರದ್ವಾಜ್ ಛಾಯಾಗ್ರಹಣ ಮತ್ತು ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿರಲಿದೆ. ಸದ್ಯದ ಮಟ್ಟಿಗೆ ತಾರಾಗಣದ ಆಯ್ಕೆ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದೇ ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಸಿದ್ಧಗೊಂಡಿದೆ. ಇನ್ನೂ ಹೆಸರಿಡದ, ರಿಷಿ ನಾಯಕನಾಗಿ ನಟಿಸಲಿರುವ ಈ ಚಿತ್ರದ ಬಗೆಗಿನ ಮತ್ತಷ್ಟು ವಿಚಾರಗಳು ಶೀಘ್ರದಲ್ಲಿಯೇ ಜಾಹೀರಾಗಲಿವೆ.

