ಚಂಡೀಗಡ: ಪಂಜಾಬ್ನ (Panjab) ಅಮೃತಸರದಲ್ಲಿ ಗುರುವಾರ ಮುಂಜಾನೆ ಗಸ್ತು ತಿರುಗುತ್ತಿದ್ದ ಸಹಾಯಕ ಸಬ್-ಇನ್ಸ್ಪೆಕ್ಟರ್ (ASI) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ಗೇಟ್ ಹಕಿಮಾ ಪೊಲೀಸ್ ಠಾಣಾ ವ್ಯಾಪ್ತಿಯ ಭಾಗ್ತವಾಲಾದ ಧಾನ್ಯ ಮಾರುಕಟ್ಟೆ (ಡಾನಾ ಮಂಡಿ) ಬಳಿ ಬೆಳಗಿನ ಜಾವ 2:30 ರ ಸುಮಾರಿಗೆ ಈ ಭೀಕರ ಕೃತ್ಯ ನಡೆದಿದೆ.
ತರಣ್ ಜಿಲ್ಲೆಯ ನಿವಾಸಿ ಹರ್ಜಿತ್ ಸಿಂಗ್ ಮೃತ ಅಧಿಕಾರಿ. ಅವರು ಮುಂಜಾನೆ ಬೈಕ್ನಲ್ಲಿ ಗಸ್ತು ತಿರುಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಿಂಗ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ʻರಾಮಾಯಣʼ – ಇಂಗ್ಲಿಷ್ ಆವೃತ್ತಿಯಲ್ಲಿ 30 ನಿಮಿಷಕ್ಕೆ ಕತ್ತರಿ; ಹಾಡುಗಳು ಸಂಪೂರ್ಣ ನಿಷಿದ್ಧ!
ಘಟನೆ ನಡೆದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ದಾಳಿಕೋರರನ್ನು ಗುರುತಿಸಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ದಾಳಿಗೆ ನಿಖರವಾದ ಕಾರಣ ಮತ್ತು ಆರೋಪಿಗಳ ಗುರುತು ಇನ್ನು ಪತ್ತೆಯಾಗಬೇಕಿದೆ. ಇದನ್ನೂ ಓದಿ: ಸೆ.19 ರಂದು ತೀರ್ಥಹಳ್ಳಿಗೆ ಸಿಎಂ ಭೇಟಿ – ಮೂರು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಸರ್ಕಾರದಿಂದ 1 ಕೋಟಿ ರೂ ಪರಿಹಾರ
ಈ ಘಟನೆಗೆ ಕಳವಳ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಮೃತ ಅಧಿಕಾರಿಯ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ. ಸರ್ಕಾರದ ವತಿಯಿಂದ 1 ಕೋಟಿ ರೂ. ಗೌರವ ಧನ ಹಾಗೂ ಎಚ್ಡಿಎಫ್ಸಿ (HDFC) ಬ್ಯಾಂಕ್ ವತಿಯಿಂದ 1 ಕೋಟಿ ರೂ. ಹೆಚ್ಚುವರಿ ವಿಮಾ ಮೊತ್ತ ಸೇರಿ ಒಟ್ಟು 2 ಕೋಟಿ ರೂ. ಪರಿಹಾರವನ್ನು ಅವರು ಪ್ರಕಟಿಸಿದ್ದಾರೆ.

