ಬೆಂಗಳೂರು: ನಗರದಲ್ಲಿ (Bengaluru) 13 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯಲಹಂಕದ (Yelahanka) ವಿನಾಯಕ ನಗರದ ಪ್ರಜ್ವಲ್ (13) ಹತ್ಯೆಯಾದ ಬಾಲಕ. ಪ್ರಜ್ವಲ್ನ ಪಕ್ಕದ ಮನೆಯ ಭಾಸ್ಕರ್ ರೆಡ್ಡಿ ಎಂಬಾತ ಹಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಕೊಲೆ ನಂತರ ಆರೋಪಿ ಕಾರಿನಲ್ಲಿ ತೆರಳುವಾಗ ರಸ್ತೆಯಲ್ಲಿ ಸರಣಿ ಅಪಘಾತ ಎಸಗಿದ್ದಾನೆ. ಈ ವೇಳೆ ವಾಹನ ಸವಾರರು ತಡೆದು ಆತನನ್ನು ಪ್ರಶ್ನಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಬಾಲಕನ ಶವ ಪತ್ತೆಯಾಗಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಎರಡು ಎಟಿಎಂನಲ್ಲಿ ಕಳ್ಳತನ – 14 ಲಕ್ಷ ದೋಚಿದ ಕಳ್ಳರು
ಪಟಾಕಿ ತರಲು ಕರೆದೊಯ್ದು ಕಿಡ್ನ್ಯಾಪ್
ಎರಡು ದಿನದ ಹಿಂದೆ ಗಣಪತಿ ಬಿಡಲು ಪಟಾಕಿ ತರಬೇಕೆಂದು ಬಾಲಕನನ್ನು ಭಾಸ್ಕರ್ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಕಾರಿನಲ್ಲಿ ಪ್ರಜ್ವಲ್ನನ್ನು ಕೂರಿಸಿಕೊಂಡು ವಿಡಿಯೋ ಮಾಡಿ, ಹಣಕ್ಕಾಗಿ ಪೋಷಕರಿಗೆ ಬೆದರಿಕೆ ಹಾಕಿದ್ದ. ಬಳಿಕ ಎಣ್ಣೆ ಮತ್ತಿನಲ್ಲಿ ಬಾಲಕನಿಗೆ ಹಾಲೋಬ್ರಿಕ್ಸ್ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಕೊಲೆ ನಂತರ ಮೃತದೇಹ ಕಾರಿನ ಡಿಕ್ಕಿಯಲ್ಲಿಟ್ಟು ಆಂಧ್ರಪ್ರದೇಶದ ಕಡೆಗೆ ಎಸ್ಕೇಪ್ ಆಗುತ್ತಿದ್ದ. ಈ ವೇಳೆ ಗಾಬರಿಯಲ್ಲಿ ಗೋಡೆಗೆ ಕಾರನ್ನು ಡಿಕ್ಕಿ ಹೊಡೆಸಿದ್ದ. ಬಳಿಕ ಬಳ್ಳಾರಿ ಸರ್ವೀಸ್ ರಸ್ತೆಯಲ್ಲಿ ಸರಣಿ ಅಪಘಾತ ಎಸಗಿದ್ದ. ಅಲ್ಲಿಗೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಬಾಲಕನ ಶವ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿತ್ತು.
ಅಪಘಾತದ ಕತೆ ಕಟ್ಟಿದ್ದ ಆರೋಪಿ
ವಿಚಾರಣೆ ವೇಳೆ ಆರೋಪಿ, ದಾರಿಯಲ್ಲಿ ಬರುವಾಗ ಬಾಲಕ ಕಾರಿಗೆ ಅಡ್ಡ ಸಿಕ್ಕು ಮೃತಪಟ್ಟಿದ್ದಾನೆ ಎಂದು ಕತೆ ಹೇಳಿದ್ದ. ತನ್ನ ಗೆಳೆಯ ಹೇಳಿದಂತೆ ಆಂಧ್ರದ ಕಡೆ ಮೃತದೇಹವನ್ನು ಕೊಂಡೊಯ್ಯುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಆರೋಪಿ ಭಾಸ್ಕರ್ ರೆಡ್ಡಿಯನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಡಿಕೆ ಬೇಯಿಸುವಾಗ ಹಂಡೆಯೊಳಗೆ ಬಿದ್ದು ವ್ಯಕ್ತಿ ಸಾವು

