– ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಪಕ್ಷವೇ ವೀಕ್ ಆದಂತೆ
ತುಮಕೂರು: ಕಾಂಗ್ರೆಸ್ ಪಕ್ಷ ತೊರೆಯಲ್ಲ, ಬೇರೆ ಯಾವುದೇ ಪಕ್ಷಕ್ಕೂ ಹೋಗಲ್ಲ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ (KN Rajanna) ಹೇಳಿದ್ದಾರೆ.
ತುಮಕೂರಿನ ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾನು ಕಾಂಗ್ರೆಸ್‌ನಲ್ಲೇ ಇರಬೇಕು ಎಂಬ ಮನಸ್ಥಿತಿಯಲ್ಲಿ ಇದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ತೊರೆಯಲ್ಲ, ಯಾವ ಪಕ್ಷಕ್ಕೂ ಹೋಗಲ್ಲ. ಕ್ಷೇತ್ರ ಪುನರ್ವಿಂಗಡಣೆ ಆದಲ್ಲಿ ಲೋಕಸಭಾ ಚುನಾವಣೆಗೆ (Lok Sabha Poll) ನಿಲ್ಲುವೆ ಎಂದು ಹೇಳಿದ್ದಾರೆ.
ಮುಂದೆ 10 ಲಕ್ಷ ಜನ ಸಂಖ್ಯೆಗೆ ಒಂದು ಲೋಕಸಭೆ ಮಾಡುವ ಉದ್ದೇಶವಿದ್ದು, ಡಿ-ಲಿಮಿಟೇಶನ್ ಆದ್ರೆ ಮಧುಗಿರಿ ಉಪವಿಭಾಗದ ತಾಲೂಕುಗಳು ಲೋಕಸಭಾ ವ್ಯಾಪ್ತಿಗೆ ಸೇರಲಿದೆ. ಇದು ಸಾಧ್ಯವಾದ್ರೆ ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಮುಂದುವರಿದು.. ಸಿದ್ದರಾಮಯ್ಯ ವೀಕ್ ಆಗುತ್ತಿದ್ದಾರೆ ಎಂಬುದು ನಿಜವಲ್ಲ. ಸಿದ್ದರಾಮಯ್ಯ ವೀಕ್ ಆದರೆ ಕಾಂಗ್ರೆಸ್ ಪಕ್ಷವೇ ವೀಕ್ ಆದಂತೆ. ಅಹಿಂದ ಮತಗಳನ್ನ ಸೆಳೆಯವ ಶಕ್ತಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಿಗೆ ಮಾತ್ರ ಸಾಧ್ಯ. ಬಿಜೆಪಿಯಲ್ಲಿ ಯಡಿಯೂರಪ್ಪ ನವರಿಗೆ ಮತ್ತು ಜೆಡಿಎಸ್‌ನಲ್ಲಿ ದೇವೇಗೌಡರಿಗೆ ಮಾತ್ರ ಮತ ತಂದುಕೊಡುವ ಶಕ್ತಿ ಇದೆ ಎಂದು ತಿಳಿಸಿದ್ದಾರೆ.
ಇನ್ನೂ ರಾಜಕೀಯದಲ್ಲಿ ವ್ಯತ್ಯಾಸಗಳು ಸಾಮಾನ್ಯ, ಆದ್ರೆ ನನಗೆ ಕಾಂಗ್ರೆಸ್ ಎಲ್ಲವನ್ನೂ ನೀಡಿದೆ. ಸಾಮಾನ್ಯ ಕ್ಷೇತ್ರದಲ್ಲಿ ಎಸ್.ಟಿ ಸಮುದಾಯಕ್ಕೆ ಸೇರಿದ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದೆ. ತಳ ಸಮುದಾಯಗಳಿಗೆ, ಅಸಹಾಯಕ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಂಗಾರಪ್ಪ, ವೀರಪ್ಪಮೊಯ್ಲಿ, ಧರ್ಮಸಿಂಗ್ ಅಂಥವರು ಕಾಂಗ್ರೆಸ್‌ನಲ್ಲಿ ಮಾತ್ರ ಸಿಎಂ ಆಗಲು ಸಾಧ್ಯ ಎಂದು ಪಕ್ಷದ ಕೊಡುಗೆಗಳನ್ನ ಸ್ಮರಿಸಿದರು.

