– ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಮಡಿಕೇರಿ: ಕೊಡಗಿನ ಕುಟ್ಟ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ಅಮೆರಿಕದ ಪ್ರವಾಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ (Government of Karnataka) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಹೋಂಸ್ಟೇ ಮಾಲೀಕರನ್ನು (Homestay Owner) ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಪರಿಗಣಿಸಿ, ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ನ್ಯಾಯಾಲಯದ ನಿರ್ದೇಶನದಂತೆ ಒಂದು ತಿಂಗಳೊಳಗೆ ಪರಿಹಾರ ಪಾವತಿಯಾಗಿಲ್ಲ ಎಂದು ಆರೋಪಿಸಿ ಹೋಂಸ್ಟೇ ಮಾಲೀಕ ಪೊನ್ನಪ್ಪ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಅಲ್ಲದೇ, ಮೂರು ವಾರಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?
ಅತ್ಯಾಚಾರ ಪ್ರಕರಣ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪದಡಿ ಪೊನ್ನಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನ ಪ್ರಶ್ನಿಸಿ, ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದ ಪೊನ್ನಪ್ಪ, 15 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನ ಭಾಗಶಃ ಪುರಸ್ಕರಿಸಿತ್ತು. ಹೋಂಸ್ಟೇ ಮಾಲೀಕರ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠ, ರಾಜ್ಯ ಸರ್ಕಾರವು ಒಂದು ತಿಂಗಳೊಳಗೆ 5 ಲಕ್ಷ ರೂ. ಪರಿಹಾರ ಪಾವತಿಸುವಂತೆ ಆದೇಶಿಸಿತ್ತು. ಆದರೆ, ಪರಿಹಾರ ಪಾವತಿಯಾಗದ ಹಿನ್ನೆಲೆ ಇದೀಗ ಪೊನ್ನಪ್ಪ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

