– ಶೇ. 100 ಸುಂಕ ಹೇರಲು ಪರಮಾಧಿಕಾರ
– ಟ್ರಂಪ್ ಸಹಿ ಬಿದ್ದರೆ ತೆರಿಗೆ ಬರೆ
ವಾಷಿಂಗ್ಟನ್: ರಷ್ಯಾದಿಂದ ಕಚ್ಚಾತೈಲ (Russia Crude Oil) ಮತ್ತು ಅನಿಲ ಖರೀದಿಸುವ ಭಾರತ(India) ಹಾಗೂ ಚೀನಾ(China) ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಬರೋಬ್ಬರಿ ಶೇ.100 ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರಿಗೆ ಪರಮಾಧಿಕಾರ ನೀಡುವ ಮಹತ್ವದ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಅನುಮೋದನೆ ನೀಡಿದೆ.
‘ಲಿಂಡ್ಸೆ ಒ. ಗ್ರಹಾಂ ನಿರ್ಬಂಧಗಳ ಕಾಯ್ದೆ-2026’ (Lindsey O. Graham Sanctioning Russia and Iran Act of 2026) ಹೆಸರಿನ ಈ ಮಸೂದೆಗೆ ಸೆನೆಟ್ ಈಗಾಗಲೇ ಅಂಗೀಕಾರ ನೀಡಿತ್ತು. ಇದೀಗ ಕೆಳಮನೆಯಲ್ಲೂ 262-159 ಮತಗಳ ಅಂತರದಿಂದ ಅಂಗೀಕಾರಗೊಂಡಿದ್ದು, ಕಾನೂನಾಗಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂಕಿತಕ್ಕೆ ಕಳುಹಿಸಲಾಗಿದೆ. ಟ್ರಂಪ್ ಎರಡನೇ ಬಾರಿ ಅಧ್ಯಕ್ಷ ಪಟ್ಟಕ್ಕೆ ಏರಿದ ನಂತರ ಉಕ್ರೇನ್‌ಗೆ ಬೆಂಬಲವಾಗಿ ಅಮೆರಿಕ ಕೈಗೊಂಡಿರುವ ಅತ್ಯಂತ ಕಠಿಣ ಹೆಜ್ಜೆ ಇದಾಗಿದೆ.
ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ಮಂಡಿಸಿದ ತಿದ್ದುಪಡಿಯಲ್ಲಿ ಭಾರತ, ಚೀನಾ, ಯುಎಇ, ಟರ್ಕಿ, ಸಿಂಗಾಪುರ, ಅಜರ್‌ಬೈಜಾನ್, ಕಜಕಿಸ್ತಾನ್, ಹಂಗೇರಿ, ಕಿರ್ಗಿಸ್ತಾನ್ ಮತ್ತು ಸ್ಲೊವಾಕಿಯಾ ಸೇರಿ ಒಟ್ಟು 10 ರಾಷ್ಟ್ರಗಳನ್ನು ನೇರವಾಗಿ ಹೆಸರಿಸಲಾಗಿದೆ. ಈ ದೇಶಗಳು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದರಿಂದ ಇವುಗಳ ಮೇಲೆ ಶೇ.100ರಷ್ಟು ದ್ವಿತೀಯ ಶ್ರೇಣಿಯ ಸುಂಕ (Secondary Tariffs) ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮಸೂದೆ ಪಾಸಾದ ತಕ್ಷಣವೇ ಈ ಸುಂಕ ಜಾರಿಯಾಗುವುದಿಲ್ಲ. ಮಸೂದೆಗೆ ಅಧ್ಯಕ್ಷ ಟ್ರಂಪ್ ಸಹಿ ಹಾಕಿ, ನಂತರ ಅವರು ತಮ್ಮ ಈ ವಿಶೇಷ ಅಧಿಕಾರವನ್ನು ಚಲಾಯಿಸಲು ನಿರ್ಧರಿಸಿದರೆ ಮಾತ್ರ ಭಾರತದ ಮೇಲೆ ಗರಿಷ್ಠ ಶೇ.100ರಷ್ಟು ಸುಂಕ ಹೇರಲ್ಪಡುತ್ತದೆ. ಇದನ್ನೂ ಓದಿ: ಯುಪಿಐಗೆ ಶುಲ್ಕ| ಸಮಿತಿ ಶಿಫಾರಸಿಗೆ ಅಂದು ಕಾಂಗ್ರೆಸ್ ಸಮ್ಮತಿ, ಇಂದು ರಾಹುಲ್ ವಿರೋಧ!

ಮಸೂದೆಯಲ್ಲಿ ಏನಿದೆ?
– ರಷ್ಯಾದ ನಾಯಕತ್ವ ಹಾಗೂ ಇಂಧನ ಕ್ಷೇತ್ರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದು.
– ನಿರ್ಬಂಧಗಳನ್ನು ತಪ್ಪಿಸಿ ಕಚ್ಚಾತೈಲ ಪೂರೈಸುವ ರಷ್ಯಾದ ‘ಶಾಡೋ ಫ್ಲೀಟ್’ (ರಹಸ್ಯ ಹಡಗುಗಳ ಜಾಲ) ಹಡಗುಗಳನ್ನು ಗುರಿಯಾಗಿಸುವುದು.
– ರಷ್ಯಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಆಮದು ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವುದು.
– ಇರಾನ್ ಮೇಲೂ ಹೆಚ್ಚುವರಿ ಆರ್ಥಿಕ ನಿರ್ಬಂಧಗಳನ್ನು ಹೇರುವುದು.
ಮಸೂದೆ ಅಂಗೀಕಾರದ ಬಳಿಕ ಮಾತನಾಡಿದ ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂತಾಲ್, “ಚೀನಾ ಮತ್ತು ಭಾರತ ತಮ್ಮ ತೈಲ ಮತ್ತು ಅನಿಲವನ್ನು ಬೇರೆಲ್ಲಿಂದಲಾದರೂ ಖರೀದಿಸುವುದು ಒಳಿತು” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಕೆಳಮನೆಯಲ್ಲಿ ಈ ಮಸೂದೆಗೆ ಕೆಲ ಡೆಮಾಕ್ರಟ್ ನಾಯಕರಿಂದ ತೀವ್ರ ವಿರೋಧವೂ ವ್ಯಕ್ತವಾಯಿತು. ಇದು ಅಧ್ಯಕ್ಷರಿಗೆ ಅತಿಯಾದ ಸುಂಕ ವಿಧಿಸುವ ಅಧಿಕಾರವನ್ನು ನೀಡುತ್ತದೆ ಮತ್ತು ಅಂತಿಮವಾಗಿ ಅಮೆರಿಕದ ನಾಗರಿಕರ ಮೇಲೆಯೇ ಆಮದು ತೆರಿಗೆಯ ಹೊರೆ ಬೀಳುವಂತೆ ಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಮಿತಿಯ ಪ್ರಮುಖ ಡೆಮಾಕ್ರಟ್ ಸದಸ್ಯ ಗ್ರೆಗೊರಿ ಮೀಕ್ಸ್ ಆಕ್ಷೇಪಿಸಿದರು. ಅಂತಿಮವಾಗಿ 58 ಡೆಮಾಕ್ರಟ್‌ಗಳು ಹಾಗೂ 203 ರಿಪಬ್ಲಿಕನ್ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರು.
ಒಂದು ವೇಳೆ ಟ್ರಂಪ್ ಈ ಶೇ.100ರಷ್ಟು ಸುಂಕವನ್ನು ಜಾರಿಗೆ ತಂದರೆ ಅದು ಅವರ ಆಡಳಿತಾವಧಿಯಲ್ಲಿ ಭಾರತ ಎದುರಿಸುವ ಅತ್ಯಂತ ಗರಿಷ್ಠ ಆಮದು ಸುಂಕವಾಗಲಿದೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಶೇ.10ರಷ್ಟು ಸುಂಕದ ಜೊತೆಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದ್ದು, ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಿಕ್ಕಟ್ಟಿಗೆ ತಳ್ಳುವ ಸಾಧ್ಯತೆಯಿದೆ.

