– ಭಾರತ್ ಜೋಡೋ ಯುವ ಸಂಘದ ನೋಂದಣಿ ಕಾರ್ಯ ತ್ವರಿತಗೊಳಿಸಿ
– ಪ್ರಜಾಸೇವಾ ಅಭಿಯಾನದಲ್ಲಿ ಬರುವ ಅರ್ಜಿಗಳ ತ್ವರಿತ ವಿಲೇವಾರಿ ಮಾಡಿ
ಬೆಂಗಳೂರು: ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಇಂದು ವಿಧಾನಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಬಡವರಿಗೆ ನಿವೇಶನ ನೀಡುವ ಕಾರ್ಯಕ್ರಮ ಘೋಷಣೆಯಾದ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಯೋಜನೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಕೆಲ ಜಿಲ್ಲೆಗಳಲ್ಲಿ ಭೂಮಿ ಗುರುತಿಸುವ ಕೆಲಸ ಆಗಿಲ್ಲ. ನಿವೇಶನ ಸಿದ್ಧಪಡಿಸಲು ಭೂಮಿ ಗುರುತಿಸುವ ಪ್ರಕ್ರಿಯೆಯನ್ನು ತಿಂಗಳಾಂತ್ಯದ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ. ಹಿರಿಯ ಅಧಿಕಾರಿಗಳು ಟೆಕ್ನಿಕಲ್ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಭೂ ಮಾಪನ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತರಾದ ವೆಂಕಟರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ಧ್ವನಿವರ್ಧಕಕ್ಕೆ ಅನುಮತಿ ನೀಡದ ಪೊಲೀಸರು; ಗೌರಿ-ಗಣೇಶನನ್ನು ನಡುರಸ್ತೆಯಲ್ಲೇ ಬಿಟ್ಟು ತೆರಳಿದ ಗ್ರಾಮಸ್ಥರು
ಭಾರತ್ ಜೋಡೋ ಯುವ ಸಂಘದ ನೋಂದಣಿ ಕಾರ್ಯ ತ್ವರಿತಗೊಳಿಸಿ
ಭಾರತ್ ಜೋಡೋ ಯುವ ಸಂಘ ಮುಖ್ಯಮಂತ್ರಿಯವರ ಕನಸಿನ ಯೋಜನೆಯಾಗಿದೆ. ಸಂಘಗಳ ನೋಂದಣಿ, ಮೆಂಟರ್ಸ್ಗಳ ನೇಮಕ ಸೇರಿದಂತೆ ಸಂಘ ಪ್ರಾರಂಭಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು. ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಅರ್ಜಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿಸಬೇಕು. ಭಾರತ್ ಜೋಡೋ ಯುವಕ ಸಂಘ ಇಡೀ ದೇಶದಲ್ಲಿ ಮೊದಲ ಬಾರಿಗೆ ಜಾರಿಗೊಳಿಸುತ್ತಿರುವ ಕಾರ್ಯಕ್ರಮ. ಇದರಿಂದ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಒಳ್ಳೆ ಹೆಸರು ಬರಲಿದೆ ಎಂದು ತಿಳಿಸಿದರು.
ಪ್ರಜಾಸೇವಾ ಅಭಿಯಾನದಲ್ಲಿ ಬರುವ ಅರ್ಜಿಗಳ ತ್ವರಿತ ವಿಲೇವಾರಿ ಮಾಡಿ
ಪ್ರಜಾಸೇವಾ ಅಭಿಯಾನದಲ್ಲಿ ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬರುತ್ತಿವೆ. ಪಹಣಿ ತಿದ್ದುಪಡಿ, ಪೋಡಿ, ಪಿಂಚಣಿ ಸಮಸ್ಯೆ ಸೇರಿದಂತೆ ಮುಂತಾದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಆರ್ಟಿಸಿ, ಪೋಡಿ ಪ್ರಕರಣಗಳನ್ನು ಸರಳೀಕರಣಗೊಳಿಸಲಾಗಿದೆ. ಆದಾಗ್ಯೂ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆದು, ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಬೆಳಗಾವಿ ಗ್ರಾಮ ಪಂಚಾಯಿತಿಯಲ್ಲಿ ತಂದೆ, ಮಗಳ ಬರ್ಬರ ಹತ್ಯೆ

