ಮೈಸೂರು: ಕೆಪಿಎಸ್ಸಿ ಹಗರಣದ(KPSC Scam) ತನಿಖೆ ತೀವ್ರಗೊಂಡರೆ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರೇ ಪರಪ್ಪನ ಅಗ್ರಹಾರ(Parappana Agrahara) ಜೈಲು ಸೇರಲಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ(Pratap Simha) ನೇರ ವಾಗ್ದಾಳಿ ನಡೆಸಿದ್ದಾರೆ.
“ಪೊಲೀಸ್ ಠಾಣೆಗೆ ನುಗ್ಗಿದರೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ವ್ಯವಸ್ಥೆ ಉಚಿತ” ಎಂದು ಹೇಳಿಕೆ ನೀಡಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಮತ್ತೊಂದು ಎಫ್ಐಆರ್ ದಾಖಲಿಸಿದರೂ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಅವರು ಗುಡುಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಕೆಪಿಎಸ್ಸಿ ಹಗರಣದ ಬಗ್ಗೆ ಮಾತನಾಡಿದ ನಂತರ ಪ್ರಿಯಾಂಕ್ ಖರ್ಗೆಗೆ ಕನಸಿನಲ್ಲೂ ಪರಪ್ಪನ ಅಗ್ರಹಾರವೇ ಕಾಣುತ್ತಿದೆ. ಆ ಭೀತಿಯಿಂದಲೇ ಅವರು ಪದೇ ಪದೇ ಜೈಲಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪ್ರಿಯಾಂಕ್ ಜೈಲು ಸೇರುವ ಕಾಲ ಹತ್ತಿರ ಬಂದಿದೆ; ಗಣೇಶೋತ್ಸವಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ: ಪ್ರತಾಪ್ ಸಿಂಹ ತಿರುಗೇಟು
ನನ್ನ ಮೇಲೆ ಈಗಾಗಲೇ 21 ಎಫ್ಐಆರ್ಗಳಿವೆ. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ವಿಚಾರಕ್ಕಾಗಿ ನನ್ನ ಮೇಲೆ ಮತ್ತೊಂದು ಕೇಸ್ ಹಾಕಿ ಜೈಲಿಗೆ ಕಳುಹಿಸಿದರೂ ನನಗೇನೂ ಬೇಸರವಿಲ್ಲ. ನಾನು ಯಾವುದಕ್ಕೂ ಜಗ್ಗುವ ಅಥವಾ ಹೆದರುವ ವ್ಯಕ್ತಿಯಲ್ಲ ಎಂದರು. ಇದನ್ನೂ ಓದಿ: ಪೊಲೀಸ್ ಠಾಣೆಗೆ ನುಗ್ಗಿದ್ರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳಿಸುವ ವ್ಯವಸ್ಥೆ ಉಚಿತ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಟಾಂಗ್
ಪ್ರಿಯಾಂಕ್ ಖರ್ಗೆ ಅವರಲ್ಲಿ ಅಭದ್ರತೆ ಹಾಗೂ ಪುಕ್ಕಲು ಸ್ವಭಾವವಿದೆ. ಆ ಕಾರಣಕ್ಕಾಗಿಯೇ ಅವರು ಸಿಕ್ಕ ಸಿಕ್ಕವರಿಗೆ ಏಕವಚನದಲ್ಲಿ ಮಾತನಾಡುವ ಸಂಸ್ಕೃತಿ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಟಿ. ನರಸೀಪುರ ಪೊಲೀಸ್ ಠಾಣೆಯ ಮುಂದೆ ಬಿಜೆಪಿ ನಡೆಸಿದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಗಣಪತಿ ಪ್ರತಿಷ್ಠಾಪನೆ ಮಾಡುವ ಯುವಕರ ಮೇಲೆ ದರ್ಪ ತೋರಿ ಧಮ್ಕಿ ಹಾಕುತ್ತಿದ್ದಾರೆ. ಕೇಸ್ ಹಾಕುವುದಾಗಿ ಜನರಲ್ಲಿ ಅನಗತ್ಯ ಭಯ ಹುಟ್ಟಿಸುತ್ತಿದ್ದಾರೆ. ಇಂತಹ ಪೊಲೀಸ್ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

