ಮಂಡ್ಯ: ಪಿಒಪಿ ಗಣೇಶ ಮೂರ್ತಿಗಳ ಬಳಕೆಯಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಮಂಕುತಿಮ್ಮ ಟ್ರಸ್ಟ್ ವತಿಯಿಂದ ಮಂಡ್ಯದಲ್ಲಿ (Mandya) ವಿನೂತನ ಜಾಗೃತಿ ಕಾರ್ಯಕ್ರಮ ನಡೆಯಿತು. ಮನೆ ಮನೆಗೆ ತೆರಳಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಯಿತು.
ಈ ವಿಶೇಷ ಜಾಗೃತಿ ಹಾಗೂ ಗಣೇಶ ಮೂರ್ತಿ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ ಚಾಲನೆ ನೀಡಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಶಿವ-ಪಾರ್ವತಿ, ಸ್ವಾಮಿ ವಿವೇಕಾನಂದ ಹಾಗೂ ಬಾಲಗಂಗಾಧರ ತಿಲಕರ ವೇಷಧಾರಿಗಳು ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿದರು.
ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವ ಸಾರುವ ಈ ವೇಷಧಾರಿಗಳು ಮಂಡ್ಯದ ಜನತೆಗೆ ಖುದ್ದು ಮಣ್ಣಿನ ಗೌರಿ-ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಗಮನ ಸೆಳೆದರು. ಅಭಿಯಾನದ ಮೂಲಕ ಒಟ್ಟು ಒಂದು ಸಾವಿರ ಮಣ್ಣಿನ ಮೂರ್ತಿಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಕೆ.ಆರ್. ನಂದಿನಿ, ಹಬ್ಬಗಳನ್ನು ಪರಿಸರಕ್ಕೆ ಮಾರಕವಾಗದಂತೆ ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಾರ್ವಜನಿಕರು ಪಿಒಪಿ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಜಲಚರಗಳಿಗೆ ಹಾಗೂ ಪರಿಸರಕ್ಕೆ ಹಾನಿ ಮಾಡದ ನೈಸರ್ಗಿಕ ಮಣ್ಣಿನ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು.ಇದನ್ನೂ ಓದಿ: ದಾವಣಗೆರೆ | ಮೋಜಿಗಾಗಿ AI ಚಿರತೆ ರಚಿಸಿ ಸುಳ್ಳು ಸುದ್ದಿ ಹಬ್ಬಿಸಿದ ಯುವಕ; ಪೊಲೀಸರಿಂದ ವಿಚಾರಣೆ
ಮಂಕುತಿಮ್ಮ ಟ್ರಸ್ಟ್ನ ಈ ವಿಭಿನ್ನ ಜಾಗೃತಿ ಕಾರ್ಯಕ್ರಮಕ್ಕೆ ಸ್ಥಳೀಯರಿಂದ ಉತ್ತಮ ಸ್ಪಂದನೆ ದೊರೆಯಿತು. ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರುವಲ್ಲಿ ಅಭಿಯಾನ ಯಶಸ್ವಿಯಾಯಿತು.ಇದನ್ನೂ ಓದಿ: ಹುಬ್ಬಳ್ಳಿ | ಗಣೇಶನನ್ನು ತರುವ ಮೆರವಣಿಗೆಯಲ್ಲಿ ಮಹಿಳೆಯರ ಜೊತೆ ಅಸಭ್ಯ ವರ್ತನೆ – ಕಿಡಿಗೇಡಿಗಳಿಗೆ ಪೊಲೀಸರಿಂದ ಲಾಠಿ ರುಚಿ

