ದಾವಣಗೆರೆ: ಮೋಜಿಗಾಗಿ AI ಬಳಸಿ ಚಿರತೆಯ ನಕಲಿ ಫೋಟೋ ಸೃಷ್ಟಿಸಿ, ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕನನ್ನು ಪೊಲೀಸರು ವಿಚಾರಣೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆ ( Davanagere) ಹರಿಹರ ತಾಲೂಕಿನಲ್ಲಿ ನಡೆದಿದೆ.
ಹರಿಹರದ ವಾಸನ ಗ್ರಾಮದ ಸುನೀಲ್ (22) ಎಂಬಾತ ಕಳೆದ ಮೂರು ದಿನಗಳ ಹಿಂದೆ ನಂದೀಶ್ವರ ಕ್ಯಾಂಪ್ನ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಿ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ. ಈ ನಕಲಿ AI ಫೋಟೋ ಜಿಲ್ಲಾದ್ಯಂತ ವೈರಲ್ ಆಗಿತ್ತು.
ಚಿರತೆ ಕಾಣಿಸಿಕೊಂಡಿರುವ ಸುದ್ದಿ ಹರಡುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಆದರೆ, ಸ್ಥಳದಲ್ಲಿ ಚಿರತೆಯ ಯಾವುದೇ ಹೆಜ್ಜೆ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಇದನ್ನೂ ಓದಿ: ಲಾರಿ ಪಲ್ಟಿಯಾಗಿ ರಸ್ತೆ ತುಂಬಾ ಚೆಲ್ಲಾಡಿದ ಈರುಳ್ಳಿ, ಬೆಳ್ಳುಳ್ಳಿ – ಕಳುವಾಗದಂತೆ ಪೊಲೀಸರಿಂದ ಭದ್ರತೆ
ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಫೋಟೋ ಹರಿಬಿಟ್ಟ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಫೋಟೋ AI ಮೂಲಕ ಸೃಷ್ಟಿಸಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.ಇದನ್ನೂ ಓದಿ: ಚಿಕ್ಕಮಗಳೂರು ಹಿಂದೂ ಮಹಾ ಗಣಪತಿಗೆ 4 ಕೆಜಿ ಬೆಳ್ಳಿ ಕಿರೀಟ, 1 ಕೆಜಿಯ ಬೆಳ್ಳಿ ಆಯುಧ ಗಿಫ್ಟ್!
ಈ ಹಿನ್ನೆಲೆಯಲ್ಲಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ. ಆದರೆ, ನಕಲಿ ಫೋಟೋ ವೈರಲ್ ಆಗಿದ್ದರಿಂದ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೋನು ಇಟ್ಟಿರುವಂತಾಗಿದೆ.

