ಬೆಂಗಳೂರು: ವೀಕೆಂಡ್ ಹಾಗೂ ಗೌರಿ ಗಣೇಶನ ಹಬ್ಬ ಹಿನ್ನೆಲೆ ದಾಖಲೆ ಮಟ್ಟದಲ್ಲಿ ಬೆಂಗಳೂರಿನ ಜನರು ಊರುಗಳತ್ತ ಮುಖ ಮಾಡಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ರಜೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ಹಾಗೂ ಊರುಗಳಿಗೆ ಜನರು ಕುಟುಂಬ ಸಮೇತ ತೆರಳುತ್ತಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಮೂಲಕ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲದ ಟೋಲ್‌ಗಳ ಮೂಲಕ ಹೊರ ಜಿಲ್ಲೆಗಳತ್ತ ತೆರಳುತ್ತಿದ್ದು, ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಬೆಳಿಗ್ಗಿನಿಂದಲೂ ಟ್ರಾಫಿಕ್ ಜಾಮ್ ಆಗಿತ್ತು. ಇನ್ನೂ ಏಕ ಕಾಲದಲ್ಲಿ ಲಕ್ಷ ಲಕ್ಷಾಂತರ ಬೆಂಗಳೂರು ಜನರು ಊರುಗಳತ್ತ ಪಯಣ ಮಾಡಿದ್ದಾರೆ.
ಇತ್ತ ಬೆಂಗಳೂರು ಟು ನೆಲಮಂಗಲ ನವಯುಗ ಟೋಲ್, ನೆಲಮಂಗಲ ಟು ಹಾಸನ ಲ್ಯಾಂಕೋ ದೇವಿಹಳ್ಳಿ ಟೋಲ್, ನೆಲಮಂಗಲ ಟು ತುಮಕೂರು ಜ್ಯಾಸ್ ಟೋಲ್ ಮಾರ್ಗದಲ್ಲಿ ಪಯಣ ನಡೆಸಿದ್ದು ಬೆಳಿಗ್ಗೆಯಿಂದ ಇಲ್ಲಿವರೆಗೂ ಸುಮಾರು 50 ರಿಂದ 55 ಸಾವಿರ ವಾಹನಗಳಲ್ಲಿ ಜನರು ಸಂಚಾರ ಮಾಡಿದ್ದಾರೆ.
ಇನ್ನೂ ಇದರಲ್ಲಿ ದ್ವಿಚಕ್ರ ಹಾಗೂ ಆಟೋಗಳ ಸಂಖ್ಯೆ ಹೊರತುಪಡಿಸಿ ದಾಖಲೆ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಹೊರ ಹೋಗಿದ್ದು, ಹಬ್ಬದ ಹಿನ್ನೆಲೆ ಜನರು ಊರು ಸೇರಿದ್ದಾರೆ.

