– ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮಾತು
ನವದೆಹಲಿ: ದೆಹಲಿಯಲ್ಲಿ (Delhi) ಆರಂಭಗೊಂಡಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit 2026) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಬ್ರಿಕ್ಸ್‌ನ 20 ವರ್ಷಗಳ ಪಯಣವನ್ನು ಉಲ್ಲೇಖಿಸಿದ ಅವರು, ಸಂಘಟನೆಯಲ್ಲಿ ಇರುವ ಏಕತೆ ಮತ್ತು ಒಮ್ಮತವನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವ ಸಮಯ ಬಂದಿದೆ ಎಂದು ಹೇಳಿದರು.
ಮುಂದಿನ 20 ವರ್ಷಗಳಿಗಾಗಿ ಬ್ರಿಕ್ಸ್ ಮಹತ್ವಾಕಾಂಕ್ಷೆಯ ಕಾರ್ಯಸೂಚಿ ರೂಪಿಸಬೇಕು. ಇದಕ್ಕೆ ಸಂಘಟನೆಯ ಕಾರ್ಯವಿಧಾನದಲ್ಲೇ ಸುಧಾರಣೆ ಆರಂಭವಾಗಬೇಕು ಎಂದು ಮೋದಿ ಹೇಳಿದರು. ಪ್ರತಿ ವರ್ಷ ಬ್ರಿಕ್ಸ್ ಅಧ್ಯಕ್ಷತೆ ಬದಲಾಗುತ್ತಿದ್ದರೂ, ಇದರಿಂದ ಸಂಘಟನೆಯ ಸಾಂಸ್ಥಿಕ ಪ್ರಗತಿಗೆ ಅಡ್ಡಿಯಾಗಬಾರದು. ಅಧ್ಯಕ್ಷತೆ ಬದಲಾದರೂ ನಿರ್ಧಾರಗಳು ಮತ್ತು ಯೋಜನೆಗಳಲ್ಲಿ ನಿರಂತರತೆ ಉಳಿಯುವಂತಹ ಬಲಿಷ್ಠ ವ್ಯವಸ್ಥೆ ಅಗತ್ಯ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಕ್ಸ್ ಸಭೆಗೂ ಮುನ್ನ ಮಹತ್ವದ ನಿರ್ಧಾರ ಘೋಷಿಸಿದ ಚೀನಾ – 6 ವರ್ಷಗಳ ನಂತರ ಭಾರತಕ್ಕೆ ಏರ್ಲೈನ್ಸ್ ಸೇವೆ ಪುನಾರಂಭ
ಪ್ರಸ್ತುತ ಜಾಗತಿಕ ಆಡಳಿತ ವ್ಯವಸ್ಥೆ ಪಿರಮಿಡ್‌ನಂತಿದ್ದು, ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿ ಕೆಲವೇ ದೇಶಗಳು ಹಾಗೂ ಸಂಸ್ಥೆಗಳ ಬಳಿ ಕೇಂದ್ರೀಕೃತವಾಗಿದೆ. ಈ ನಿರ್ಧಾರಗಳಿಂದ ನೇರವಾಗಿ ಪರಿಣಾಮಕ್ಕೊಳಗಾಗುವ ಹಲವು ದೇಶಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದರು. ಎಲ್ಲ ದೇಶಗಳ ಧ್ವನಿಗೂ ಸೂಕ್ತ ಪ್ರಾತಿನಿಧ್ಯ ದೊರೆಯುವಂತಹ ಜಾಗತಿಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಬ್ರಿಕ್ಸ್ ಕೆಲಸ ಮಾಡಬೇಕು ಎಂದು ಪ್ರಧಾನಿ ಹೇಳಿದರು.

ಯುಎನ್‌ಎಸ್‌ಸಿ ಸುಧಾರಣೆ ಮುಂದೂಡಲು ಸಾಧ್ಯವಿಲ್ಲ
ಜಾಗತಿಕ ಆಡಳಿತ ಸುಧಾರಣೆಗಾಗಿ ಮುಂದಿನ ಶೃಂಗಸಭೆಯೊಳಗೆ 10 ಪ್ರಸ್ತಾವನೆಗಳನ್ನು ಸಿದ್ಧಪಡಿಸಿ, ಅವುಗಳನ್ನು ಬ್ರಿಕ್ಸ್ ಸುಧಾರಣಾ ಮಾರ್ಗಸೂಚಿಯಾಗಿ ರೂಪಿಸುವ ಪ್ರಸ್ತಾವವನ್ನು ಮೋದಿ ಮುಂದಿಟ್ಟರು. ಈ ಸುಧಾರಣೆಯಲ್ಲಿ ಪ್ರಾತಿನಿಧ್ಯ, ಸ್ಪಂದನಶೀಲತೆ ಮತ್ತು ನಿಯಮ ರೂಪಿಸುವಿಕೆ ಎಂಬ ಮೂರು ಪ್ರಮುಖ ಅಂಶಗಳಿಗೆ ಆದ್ಯತೆ ನೀಡಬೇಕು ಎಂದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಯನ್ನು ಇನ್ಮುಂದೆ ಮುಂದೂಡಲು ಸಾಧ್ಯವಿಲ್ಲ ಎಂದು ಮೋದಿ ಪ್ರತಿಪಾದಿಸಿದರು. ಹಣಕಾಸು ಸಂಸ್ಥೆಗಳಲ್ಲಿ ಮತದಾನದ ಹಕ್ಕು ಮತ್ತು ಆರ್ಥಿಕ ನೀತಿಗಳು ಇಂದಿನ ವಾಸ್ತವಿಕತೆಗೆ ಅನುಗುಣವಾಗಿರಬೇಕು. ಜಾಗತಿಕ ಆರ್ಥಿಕತೆಗೆ ವೇಗ ನೀಡುತ್ತಿರುವ ದೇಶಗಳಿಗೆ ಸೂಕ್ತ ಪಾತ್ರ ದೊರೆಯಬೇಕು ಎಂದು ಹೇಳಿದರು. ಇದನ್ನೂ ಓದಿ: BRICS Summit | ವರ್ಷಗಳ ಹಿಂದೆಯೆ ಅರ್ಜಿ ಸಲ್ಲಿಸಿದ್ರೂ ಪಾಕಿಸ್ತಾನಕ್ಕೆ ಸಿಗದ ಬ್ರಿಕ್ಸ್ ಸದಸ್ಯತ್ವ
ಸಮುದ್ರ ಭದ್ರತೆಗೆ ತುರ್ತು ವ್ಯವಸ್ಥೆ
ಜಾಗತಿಕ ವ್ಯಾಪಾರದಲ್ಲಿ ಸಮುದ್ರಯಾನಿಗಳ (ಸೀಫೇರರ್ಸ್) ಕೊಡುಗೆ ಮಹತ್ವದ್ದಾಗಿದೆ. ಆದರೆ, ಅವರಿಗೆ ಹಲವು ಸಂದರ್ಭಗಳಲ್ಲಿ ತೊಂದರೆಗಳು ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ತುರ್ತು ಸಮುದ್ರ ಭದ್ರತಾ ವ್ಯವಸ್ಥೆ ರೂಪಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಮೋದಿ ಸಲಹೆ ನೀಡಿದರು.
ಗ್ಲೋಬಲ್ ಸೌತ್‌ಗೆ ನಿಯಮ ರೂಪಿಸುವಲ್ಲಿ ಪಾತ್ರ
ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ನಿರ್ಣಾಯಕ ತಂತ್ರಜ್ಞಾನಗಳು ಭವಿಷ್ಯದ ನೀತಿ ಮತ್ತು ನಿಯಮಗಳನ್ನು ರೂಪಿಸುತ್ತಿವೆ. ಹೀಗಾಗಿ, ಗ್ಲೋಬಲ್ ಸೌತ್ ದೇಶಗಳನ್ನು ಕೇವಲ ನಿಯಮ ಪಾಲಿಸುವವರಾಗಿ ಅಲ್ಲ, ನಿಯಮ ರೂಪಿಸುವವರಾಗಿ ಬೆಳೆಸುವತ್ತ ಗಮನಹರಿಸಬೇಕು ಎಂದು ಮೋದಿ ಹೇಳಿದರು. ಇದನ್ನೂ ಓದಿ: 7 ವರ್ಷಗಳ ಬಳಿಕ ಫಸ್ಟ್ ಟೈಮ್ ಭಾರತಕ್ಕೆ ಜಿನ್‌ಪಿಂಗ್ – ಶೃಂಗಸಭೆಗಾಗಿ ದೆಹಲಿಗೆ ಆಗಮನ
ಭಾರತ ಈ ನಿಟ್ಟಿನಲ್ಲಿ ನಾಯಕತ್ವ ವಹಿಸಲು ಸಿದ್ಧವಿದೆ. ಭವಿಷ್ಯ ನಮ್ಮದಾಗಿದ್ದರೆ, ಆ ಭವಿಷ್ಯದ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ಕೂಡ ನಮ್ಮದಾಗಿರಬೇಕು ಎಂಬ ಸಂದೇಶವನ್ನು ಬ್ರಿಕ್ಸ್ ಶೃಂಗಸಭೆ ನೀಡಬೇಕು ಎಂದು ಪ್ರಧಾನಿ ಮೋದಿ ತಿಳಿಸಿದರು.

