– ಲೋಕೋಪಯೋಗಿ ಅಕ್ರಮದ ದಾಖಲೆಗಳ ಪರಿಶೀಲನೆಗೆ ಇಳಿದ ಇಡಿ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಚುರುಕುಗೊಳಿಸಿದೆ. ಸತೀಶ್ ಜಾರಕಿಹೊಳಿ (Satish Jarkiholi) ಅವರ ನಿವಾಸದಲ್ಲಿ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಆ ದಾಖಲೆಗಳನ್ನ ಪರಿಶೀಲಿಸಲು ಇಡಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಪಿಡಬ್ಲ್ಯುಡಿ ಇಲಾಖೆಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆ ತನಿಖೆ ನಡೆಯುತ್ತಿದೆ. ಎಡಿಜಿಪಿ ಕಂಪನಿಯಿಂದ (ADGP Company) ಕಿಕ್ಬ್ಯಾಕ್ ಪಡೆದಿರುವ ಆರೋಪವೂ ಕೇಳಿಬಂದಿದ್ದು, ಈ ಹಿನ್ನೆಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ನೇರವಾಗಿ ತನಿಖೆ ನಡೆಸುವ ಅಧಿಕಾರ ಇಡಿಗೆ ಇಲ್ಲದ ಕಾರಣ, ಪ್ರಕರಣದ ಕುರಿತು ಲೋಕಾಯುಕ್ತಕ್ಕೆ ಪತ್ರ ಬರೆಯಲು ಇಡಿ ಮುಂದಾಗಿದೆ ಎನ್ನಲಾಗಿದೆ.
ಕೆಪಿಎಸ್ಸಿ ಸೇರಿ ಹಲವು ಪ್ರಕರಣಗಳ ಪ್ರಗತಿ ಪರಿಶೀಲನೆ
ಇದೇ ವೇಳೆ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಪ್ರಮುಖ ಪ್ರಕರಣಗಳ ತನಿಖೆಯ ಪ್ರಗತಿ ಪರಿಶೀಲಿಸಲು ಇಡಿ ನಿರ್ದೇಶಕ ರಾಹುಲ್ ನವೀನ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಡಿ ನಿರ್ದೇಶಕ ರಾಹುಲ್ ನವೀನ್ ಸೇರಿದಂತೆ ಸ್ಪೆಷಲ್ ಡೈರೆಕ್ಟರ್ಗಳು ಇಂದು ಸಂಜೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ನಾಳೆಯಿಂದ 2 ದಿನಗಳ ಕಾಲ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಮುಖ ಪ್ರಕರಣಗಳ ತನಿಖೆಯ ಪ್ರಗತಿ ಪರಿಶೀಲನೆ ನಡೆಯಲಿದೆ.
ಕೆಪಿಎಸ್ಸಿ ನೇಮಕಾತಿ ಪ್ರಕರಣ, ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಪ್ರಕರಣ, ಮುಡಾ ಪ್ರಕರಣ ಹಾಗೂ ವಾಲ್ಮೀಕಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ತನಿಖೆಯ ಮುಂದಿನ ಹಂತಗಳ ಬಗ್ಗೆ ರಾಹುಲ್ ನವೀನ್ ಅವರು ಪರಿಶೀಲನೆ ನಡೆಸಲಿದ್ದಾರೆ.

