– ಇದು ಕೇವಲ ವ್ಯಕ್ತಿಯ ಚಾರಿತ್ರ್ಯ ಹರಣ ಅಂತ ಟೀಕೆ
ನವದೆಹಲಿ: ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರಿಗೆ ಜಾರಿ ನಿರ್ದೇಶನಾಲಯ (Enforcement Directorate) ಶಾಕ್ ಕೊಟ್ಟಿದೆ. ಜಾರಕಿಹೊಳಿ ಅವರ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ಇಡಿ ಶೋಧಕಾರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪ್ರಕಟಣೆ ಮೂಲಕ ಹಂಚಿಕೊಂಡಿದ್ದು, ಲೋಕೋಪಯೋಗಿ ಇಲಾಖೆಯಲ್ಲೂ ಅವ್ಯವಹಾರ ನಡೆದಿರೋದನ್ನ ಬಹಿರಂಗಪಡಿಸಿದೆ.
ಈ ಮಾಹಿತಿಯನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ (Vijay Mallya), ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.
Enforcement Directorate boasting this. No chargesheet. No trial. Just character assassination in public. This does not happen in any other Country. Please think for yourself. pic.twitter.com/EcuxqeBwWk
— Vijay Mallya (@TheVijayMallya) September 11, 2026
ʻಜಾರಿ ನಿರ್ದೇಶನಾಲಯ (ED) ಇದನ್ನ ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದೆ. ಆದ್ರೆ ಯಾವುದೇ ದೋಷಾರೋಪ ಪಟ್ಟಿ ಇಲ್ಲ, ವಿಚಾರಣೆಯೂ ಇಲ್ಲ. ಸಾರ್ವಜನಿಕವಾಗಿ ಕೇವಲ ಚಾರಿತ್ರ್ಯ ಹರಣ (ವ್ಯಕ್ತಿತ್ವ ಹನನ ಎಂದರ್ಥ) ನಡೆಯುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯುವುದಿಲ್ಲ. ದಯವಿಟ್ಟು ನೀವೇ ಸ್ವತಃ ಯೋಚಿಸಿʼ ಎಂದು ಬರೆದುಕೊಂಡಿದ್ದಾರೆ. ಮಲ್ಯ ಅವರ ಎಕ್ಸ್ ಪೋಸ್ಟ್‌ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಶಾಸಕರು ಸಚಿವರಿಗೆ ಸಿಎಂ ಎಚ್ಚರಿಕೆ
ಇನ್ನೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಮತ್ತೆ ದಾಳಿ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರನ್ನು ಟ್ರಾಪ್ ಮಾಡೋದಕ್ಕೆ ಇಡಿ ಅಧಿಕಾರಿಗಳು ತಯಾರಿ ನಡೆಸಿದ್ದು, ಇನ್ನೂ 3-4 ಮಂದಿ ಮೇಲೆ ದಾಳಿ ಆಗೋ ಸಾಧ್ಯತೆ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನಾಯಕರ ಮೇಲೆ ಏಕೆ ದಾಳಿ ನಡೆಯುತ್ತಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಮುನ್ನವೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ದಾಳಿ ಬಗ್ಗೆ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದರು. ನಮ್ಮದು ವರ್ಷಕ್ಕೆ 2 ಸಾವಿರ ಕೋಟಿ ಟರ್ನ್ ಓವರ್ ಇದೆ. ವಿದೇಶದಲ್ಲಿ ಹೂಡಿಕೆ ಮಾಡಲು ಸರ್ಚ್ ಮಾಡುತ್ತಿದ್ದು, ಇನ್ನೂ ಹೂಡಿಕೆಯಾಗಿಲ್ಲ ಅಂತ ಸ್ಪಷ್ಟಪಡಿಸಿದ್ದರು.
ಇಡಿ ವಶಪಡಿಸಿಕೊಂಡಿರೋ 2 ಕೋಟಿ ಕ್ಲೈಮ್ ಮಾಡೋದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇಡಿ ಪ್ರಕಟಣೆ ಹೊರಡಿಸಿ, ಗುತ್ತಿಗೆದಾರರಿಂದ ಲಂಚ ಪಡೆದಿರೋದು ಹಾಗೂ ಪಿಡಬ್ಲ್ಯೂಡಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೋದನ್ನ ಬಹಿರಂಗಪಡಿಸಿದೆ.

