ಶಿಮ್ಲಾ: ಮುಂಬರುವ ವಿಧಾನಸಭಾ ಚುನಾವಣೆಗೆ (Himachal Assembly Poll) ಮುನ್ನವೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿನ್ನಡೆಯಾಗಿದೆ. ಎರಡು ದಿನಗಳ ಹಿಂದೆಯಷ್ಟೇ ನಡೆದ ಶಿಮ್ಲಾ ಜಿಲ್ಲಾ ಪಂಚಾಯತ್ (ಅಲ್ಲಿನ ಪ್ರಕಾರ ಜಿಲ್ಲಾ ಪರಿಷತ್) ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಶಿಮ್ಲಾ ಜಿಲ್ಲಾ ಪಂಚಾಯಿತಿಯ (Shimla Zila Parishad) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಈ ಮೂಲಕ 26 ವರ್ಷಗಳ ಬಳಿಕ ಕೇಸರಿ ಪಕ್ಷವು ಕಾಂಗ್ರೆಸ್ ಭದ್ರಕೋಟೆಯನ್ನ ಛಿದ್ರಗೊಳಿಸಿ, ಅಧಿಕಾರವನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ (Congress) ಬೆಂಬಲಿತ ಅಭ್ಯರ್ಥಿ ಸುರೇಂದ್ರ ರೆಟ್ಕಾ (10 ಮತಗಳು) ವಿರುದ್ಧ 13 ಮತಗಳನ್ನ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಭೂಪೇಂದರ್ ಸಿಸೋಡಿಯಾ ಅಧ್ಯಕ್ಷರಾಗಿ ಆಯ್ಕೆಯಾದರು. ಮತ್ತೊಂದೆಡೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೀನಾಕ್ಷಿ (10 ಮತಗಳು) ವಿರುದ್ಧ 14 ಮತಗಳನ್ನ ಪಡೆಯುವ ಮೂಲಕ ಬಿಜೆಪಿ ಬೆಂಬಲಿತ ಭರತ್ ಕ್ಲಾಂಟಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ ಹಿಮಾಚಲ ಪ್ರದೇಶದ ರಾಜ್ಯಾಧ್ಯಕ್ಷ ಡಾ. ರಾಜೀವ್ ಬಿಂದಾಲ್ ಈ ಗೆಲುವನ್ನು ಕೊಂಡಾಡಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತಾ, ಈ ಗೆಲುವು 2027ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂಬುದನ್ನ ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಜಿಲ್ಲಾ ಪಂಚಾಯ್ತಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ತನ್ನ ಅಧಿಕಾರ ಹಾಗೂ ಹಣದ ಬಲವನ್ನ ದುರುಪಯೋಗಪಡಿಸಿಕೊಂಡಿತು. ಆದಾಗ್ಯೂ ಶಿಮ್ಲಾ ಜಿಲ್ಲಾ ಪಂಚಾಯ್ತಿ ಚುನಾವಣೆ ಗೆಲ್ಲುವಲ್ಲಿ ವಿಫಲವಾಗಿದೆ ಎಂದು ಎಕ್ಸ್ ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.
2027ರ ದ್ವಿತೀಯಾರ್ಧದಲ್ಲಿ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. 2022 ರಲ್ಲಿ ನಡೆದ ಹಿಂದಿನ ಚುನಾವಣೆಯಲ್ಲಿ, ಹಿಮಾಚಲ ಪ್ರದೇಶ ವಿಧಾನಸಭೆಯ ಒಟ್ಟು 68 ಸ್ಥಾನಗಳ ಪೈಕಿ 40 ಸ್ಥಾನಗಳನ್ನ ಗೆಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಮರಳಿತ್ತು. ಉಚಿತ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದವು. ಆಗ ಬಿಜೆಪಿ ಕೇವಲ 25 ಸ್ಥಾನಗಳನ್ನ ಮಾತ್ರ ಗೆಲ್ಲಲು ಶಕ್ತವಾಗಿತ್ತು. ಆದ್ರೆ ಮುಂದಿನ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಾಗಲೇ ಬಿಜೆಪಿ ಜಿಪಂ ನಲ್ಲಿ ಗೆಲುವು ಸಾಧಿಸಿರೋದು ಅಚ್ಚರಿ ಮೂಡಿಸಿದೆ.

