– ಚೀನಾ, ರಷ್ಯಾ ಬೆಂಬಲವಿದ್ರೂ ಪಾಕ್ಗೆ ಸಿಗದ ಸದಸ್ಯತ್ವ
ಇಸ್ಲಾಮಾಬಾದ್/ನವದೆಹಲಿ: ಭಾರತದ ಆತಿಥ್ಯದಲ್ಲಿ ಇಂದಿನಿಂದ 18ನೇ ಬ್ರಿಕ್ಸ್ ಶೃಂಗಸಭೆ (BRICS Summit) ಆರಂಭಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಅಚ್ಚರಿ ವಿಷಯವೊಂದು ಬೆಳಕಿಗೆ ಬಂದಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದಂತಹ ಉದಯೋನ್ಮುಖ ಆರ್ಥಿಕತೆಗಳ ಒಕ್ಕೂಟ ʻಬ್ರಿಕ್ಸ್ʼ ಸೇರಲು ಪಾಕಿಸ್ತಾನ (Pakistan) ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿತ್ತು ಅನ್ನೋದು ತಿಳಿದುಬಂದಿದೆ.
ಹೌದು, ಬ್ರಿಕ್ಸ್ ಒಕ್ಕೂಟ ಕಳೆದ ವರ್ಷ ʻಬ್ರಿಕ್ಸ್+ʼ (BRICS+) ಆಗಿ ವಿಸ್ತರಣೆಗೊಂಡಿತು. ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳನ್ನು ಹೊಸ ಸದಸ್ಯ ರಾಷ್ಟ್ರಗಳನ್ನಾಗಿ ಸೇರಿಸಿಕೊಳ್ಳಲಾಯಿತು. ಹಾಗಾಗಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕೂಡ ಬ್ರಿಕ್ಸ್ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿತ್ತು. ಆದ್ರೆ ಭಾರತಕ್ಕಿರುವ ‘ವೀಟೋ’ (ನಿಷೇಧಾಧಿಕಾರ) ಅಧಿಕಾರವು ಪಾಕಿಸ್ತಾನವನ್ನು ಹೊರಗಿಡುವಂತೆ ಮಾಡಿದೆ.

ಬ್ರಿಕ್ಸ್ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಇತರ 29 ದೇಶಗಳ ಪೈಕಿ ಪಾಕಿಸ್ತಾನವೂ ಒಂದಾಗಿದೆ. ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸವಾಲುಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಸಮೀಕ್ಷೆಗಳ ಪ್ರಕಾರ, ಪಾಕಿಸ್ತಾನ ದೇಶದ ಜಿಡಿಪಿ ಬೆಳವಣಿಗೆ ದರವು ಶೇ.3.70 ರಷ್ಟಿತ್ತು. ಹಾಗಾಗಿ ಹಣಕಾಸಿನ ಆಯ್ಕೆಗಳನ್ನು ವೈವಿಧ್ಯಮಯಗೊಳಿಸಲು ಹಾಗೂ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಮೇಲಿನ ಅವಲಂಬನೆ ಕಡಿಮೆ ಮಾಡಲು ಪಾಕ್ ಬ್ರಿಕ್ಸ್ ಸದಸ್ಯತ್ವಕ್ಕೆ ಅರ್ಜಿ ಹಾಕಿದೆ. ಅಷ್ಟೇ ಅಲ್ಲದೇ ಬ್ರಿಕ್ಸ್ ಬೆಂಬಲಿತ ʻನ್ಯೂ ಡೆವಲಪ್ಮೆಂಟ್ ಬ್ಯಾಂಕ್ʼನಲ್ಲಿ 580 ದಶಲಕ್ಷ ಡಾಲರ್ (ಅಂದಾಜು 5,544 ಕೋಟಿ ರೂಪಾಯಿ) ಮೌಲ್ಯದ ಷೇರುಗಳನ್ನೂ ಖರೀದಿಸಿದೆ ಎಂದು ವರದಿಗಳು ತಿಳಿಸಿವೆ.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಭಾರತದ ರಫ್ತು ಶೇ.48.8 ರಷ್ಟು ಹೆಚ್ಚಳ
‘ಗ್ಲೋಬಲ್ ಸೌತ್’ (ಜಾಗತಿಕ ದಕ್ಷಿಣದ ರಾಷ್ಟ್ರಗಳು) ಪ್ರತಿನಿಧಿಸುವ ಪ್ರಮುಖ ಗುಂಪಾಗಿ ಬ್ರಿಕ್ಸ್ ಒಕ್ಕೂಟವು ಪಡೆಯುತ್ತಿರುವ ಮನ್ನಣೆ ಹೆಚ್ಚಾಗುತ್ತಿದೆ. ಈ ಸಮಯದಲ್ಲೇ ಪಾಕಿಸ್ತಾನದಿಂದ ಸದಸ್ಯತ್ವಕ್ಕೆ ಅರ್ಜಿಯೂ ಸಲ್ಲಿಕೆಯಾಗಿದೆ.

ಸದ್ಯ ಈ ಒಕ್ಕೂಟವು ವಿಶ್ವದ ಜನಸಂಖ್ಯೆಯ ಸುಮಾರು ಶೇ.49 ರಷ್ಟು ಮತ್ತು ‘ಖರೀದಿ ಸಾಮರ್ಥ್ಯದ ಸಮಾನತೆ’ (PPP) ಆಧಾರದ ಮೇಲೆ ಜಾಗತಿಕ ಜಿಡಿಪಿಯ ಸುಮಾರು 40% ಪ್ರತಿನಿಧಿಸುತ್ತದೆ. ಅಲ್ಲದೇ ಬ್ರಿಕ್ಸ್ ದೇಶಗಳೊಂದಿಗೆ ಭಾರತದ ವ್ಯಾಪಾರವೂ ಗಣನೀಯವಾಗಿ ಬೆಳೆದಿದೆ. ಈ ಗುಂಪಿಗೆ ಭಾರತದ ರಫ್ತು ಶೇ.48.8 ರಷ್ಟು ಹೆಚ್ಚಾಗಿದ್ದು, 64.3 ಬಿಲಿಯನ್ ಯುಎಸ್ಡಿ (USD) ಯಿಂದ 95.7 ಬಿಲಿಯನ್ ಯುಎಸ್ಡಿ ತಲುಪಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಚೀನಾ, ರಷ್ಯಾ ಬೆಂಬಲವಿದ್ರೂ ಪಾಕ್ಗೆ ಸಿಗದ ಸದಸ್ಯತ್ವ
ಇನ್ನೂ ಬ್ರಿಕ್ಸ್ ಒಕ್ಕೂಟ ಪ್ರವೇಶಕ್ಕೆ ಚೀನಾ ಮತ್ತು ರಷ್ಯಾದ ಬೆಂಬಲವಿದೆ ಎಂದು ಹೇಳಲಾಗುತ್ತಿದ್ದರೂ ಸದಸ್ಯತ್ವ ಇನ್ನೂ ಮರಿಚಿಕೆಯಾಗಿದೆ. ಇದಕ್ಕೆ ಕಾರಣ ಭಾರತದ ವಿರೋಧ. ʻಬ್ರಿಕ್ಸ್ʼ ಒಕ್ಕೂಟಕ್ಕೆ ಹೊಸ ಸದಸ್ಯರನ್ನ ಸೇರಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಎಲ್ಲಾ ಸದಸ್ಯ ರಾಷ್ಟ್ರಗಳ ಒಮ್ಮತದ ಅನುಮೋದನೆ ಅತ್ಯಗತ್ಯವಾಗಿದೆ. ಆದ್ರೆ ಭಾರತ ವಿರೋಧ ಇರೋದ್ರಿಂದ ಪಾಕಿಸ್ತಾನಕ್ಕೆ ಬ್ರಿಕ್ಸ್ ಸದಸ್ಯತ್ವ ಕನಸಾಗಿ ಉಳಿದಿದೆ.

