ದುಬೈ: ಶಫಾಲಿ ವರ್ಮಾ ಅಮೋಘ ಅರ್ಧಶತಕ, ಬೌಲರ್‌ಗಳ ಬಿಗಿ ಹಿಡಿತದ ನೆರವಿನಿಂದ ಇಂದು ಬಾಂಗ್ಲಾ ಮಹಿಳಾ ತಂಡದ ವಿರುದ್ಧ ನಡೆದ ಟಿ20 ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡ 40 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನೊಂದಿಗೆ ಭಾರತೀಯ ಮಹಿಳಾ ತಂಡ 10ನೇ ಬಾರಿಗೆ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. 2004, 2005–06, 2006, 2008, 2012, 2016, 2018, 2022 ಹಾಗೂ 2024ರ ಬಳಿಕ 10ನೇ ಬಾರಿಗೆ ಫೈನಲ್ ತಲುಪಿದೆ.
ಈವರೆಗೆ ಭಾರತ ವನಿತೆಯರ ತಂಡ 7 ಬಾರಿ (2004, 2005–06, 2006, 2008, 2012, 2016 ಮತ್ತು 2022) ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 2 ಬಾರಿ (2018, 2024) ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಇದೀಗ 10ನೇ ಬಾರಿ ಫೈನಲ್ ತಲುಪಿದ್ದು, 8ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಬಳಿಸಿತ್ತು. 150 ರನ್‌ಗಳ ಸ್ಪರ್ಧಾತ್ಮಕ ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ಈ ಬಾರಿ ಏಷ್ಯಾಕಪ್ ಅಭಿಯಾನವನ್ನ ಮುಗಿಸಿತು.

