ನವದೆಹಲಿ: ದೇಶದಲ್ಲಿ ಆನ್ಲೈನ್ ಶಾಪಿಂಗ್ ಮಾಡುವ ಗ್ರಾಹಕರಿಗೆ ಇನ್ಮುಂದೆ ಹಲವು ಬದಲಾವಣೆಗಳು ಎದುರಾಗಲಿವೆ. ಇ-ಕಾಮರ್ಸ್ (E Commerce) ವೇದಿಕೆಗಳು ಉತ್ಪನ್ನಗಳ ಬೆಲೆ, ರಿಯಾಯಿತಿ, ಸರ್ಚ್ ರಿಸಲ್ಟ್ಗಳು ಹಾಗೂ ಪ್ರಾಯೋಜಿತ ಉತ್ಪನ್ನಗಳನ್ನು ಪ್ರದರ್ಶಿಸುವ ರೀತಿಯಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ.
ಗ್ರಾಹಕರಿಗೆ ಹೆಚ್ಚಿನ ಬೆಲೆ ಪಾರದರ್ಶಕತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು (Central Government) ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಗಳು, 2020ಕ್ಕೆ ತಿದ್ದುಪಡಿ ಮಾಡಿದೆ. ಬೆಲೆ ಪಾರದರ್ಶಕತೆ, ಪ್ರಾಯೋಜಿತ ಉತ್ಪನ್ನಗಳ ಪ್ರದರ್ಶನ, ಸರ್ಚ್ ರಿಸಲ್ಟ್ಗಳಲ್ಲಿ ಹಸ್ತಕ್ಷೇಪ ಹಾಗೂ ಗ್ರಾಹಕರನ್ನು ಪ್ರಭಾವಿಸುವ ‘ಡಾರ್ಕ್ ಪ್ಯಾಟರ್ನ್’ಗಳ ಬಳಕೆಗೆ ಸಂಬಂಧಿಸಿದಂತೆ ನಿಯಮಗಳನ್ನ ಮತ್ತಷ್ಟು ಕಠಿಣಗೊಳಿಸಲಾಗಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿರುವಂತೆ, ʻಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) (ತಿದ್ದುಪಡಿ) ನಿಯಮಗಳು, 2026ʼ ಇದು 2027ರ ಜನವರಿ 1 ರಿಂದ ಜಾರಿಗೆ ಬರಲಿವೆ.
ಆನ್ಲೈನ್ ಶಾಪಿಂಗ್ನಲ್ಲಿ ಆಗುವ ಬದಲಾವಣೆಗಳೇನು?
1. ರಿಯಾಯಿತಿ ನೀಡುವಾಗ ಹಿಂದಿನ ನಿಜವಾದ ಬೆಲೆ ತೋರಿಸಬೇಕು
ರಿಯಾಯಿತಿ ಘೋಷಿಸುವ ಸಂದರ್ಭದಲ್ಲಿ ಇ-ಕಾಮರ್ಸ್ ವೇದಿಕೆಗಳು ಉತ್ಪನ್ನದ ರಿಯಾಯಿತಿ ಬೆಲೆ ಹಾಗೂ ಹಿಂದಿನ ಬೆಲೆ (Prior Price) ಎರಡನ್ನೂ ತೋರಿಸಬೇಕಾಗುತ್ತದೆ. ಇಲ್ಲಿ ‘ಹಿಂದಿನ ಬೆಲೆ’ ಆಂದ್ರೆ, ರಿಯಾಯಿತಿ ಘೋಷಿಸುವುದಕ್ಕೂ ಮುನ್ನದ 30 ದಿನಗಳ ಅವಧಿಯಲ್ಲಿ ಆ ಉತ್ಪನ್ನ ಮಾರಾಟ ಮಾಡಲಾಗಿದ್ದ ಅತ್ಯಂತ ಕಡಿಮೆ ಬೆಲೆ. ಇದರಿಂದ ಆನ್ಲೈನ್ ಶಾಪಿಂಗ್ನಲ್ಲಿ ತೋರಿಸಲಾಗುವ ರಿಯಾಯಿತಿ ನಿಜವಾಗಿಯೂ ಎಷ್ಟು ಇದೆ? ಎಂಬುದನ್ನು ಗ್ರಾಹಕರು ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ.

2. ಸರ್ಚ್ ರಿಸಲ್ಟ್ ತಿರುಚುವಂತಿಲ್ಲ
ಗ್ರಾಹಕರು ಯಾವುದಾದರೂ ಉತ್ಪನ್ನವನ್ನ ಹುಡುಕಿದಾಗ ಬರುವ ಸರ್ಚ್ ರಿಸಲ್ಟ್ಗಳನ್ನ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುವ ರೀತಿಯಲ್ಲಿ ಅಥವಾ ಅವರ ಹುಡುಕಾಟಕ್ಕೆ ಸಂಬಂಧವಿಲ್ಲದಂತೆ ತಿರುಚಲು ಇ-ಕಾಮರ್ಸ್ ವೇದಿಕೆಗಳಿಗೆ ಅವಕಾಶ ಇರುವುದಿಲ್ಲ. ಗ್ರಾಹಕರಿಗೆ ತಪ್ಪು ನಿರ್ಧಾರ ಕೈಗೊಳ್ಳುವಂತೆ ಮಾಡುವ ಉದ್ದೇಶದಿಂದ ಉತ್ಪನ್ನಗಳ ಸ್ಥಾನ ಅಥವಾ ಪ್ರದರ್ಶನ ಕ್ರಮವನ್ನ ಉದ್ದೇಶಪೂರ್ವಕವಾಗಿ ಬದಲಾಯಿಸುವಂತಿಲ್ಲ.
3. ಪ್ರಾಯೋಜಿತ ಉತ್ಪನ್ನಗಳನ್ನ ಸ್ಪಷ್ಟವಾಗಿ ಗುರುತಿಸಬೇಕು
ಹಣ ಪಾವತಿಸಿ ಪ್ರಚಾರ ಮಾಡಲಾಗಿರುವ ಯಾವುದೇ ಉತ್ಪನ್ನವು ಸರ್ಚ್ ರಿಸಲ್ಟ್ಗಳಲ್ಲಿ ಅಥವಾ ಶಾಪಿಂಗ್ ವೇದಿಕೆಯ ಇತರೆ ವಿಭಾಗಗಳಲ್ಲಿ ಕಾಣಿಸಿಕೊಂಡರೆ, ಅದು ಪ್ರಾಯೋಜಿತ ಉತ್ಪನ್ನ ಎಂಬುದನ್ನ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು.
ಹೊಸ ನಿಯಮಗಳ ಪ್ರಕಾರ, ಇಂತಹ ಪ್ರಾಯೋಜಿತ ಪಟ್ಟಿಗಳಿಗೆ ಸ್ಪಷ್ಟ ಹಾಗೂ ಪ್ರಮುಖ ಸೂಚನೆ ನೀಡಬೇಕಾಗುತ್ತದೆ. ಇದರಿಂದ ಗ್ರಾಹಕರು ತಮ್ಮ ಹುಡುಕಾಟಕ್ಕೆ ಸಂಬಂಧಿಸಿ ಸ್ವಾಭಾವಿಕವಾಗಿ ಕಾಣಿಸಿಕೊಂಡ ಉತ್ಪನ್ನಗಳು ಮತ್ತು ಹಣ ಪಾವತಿಸಿ ಪ್ರಚಾರ ಮಾಡಲಾಗುತ್ತಿರುವ ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು.

4. ‘ಡಾರ್ಕ್ ಪ್ಯಾಟರ್ನ್’ಗಳ ವಿರುದ್ಧ ಬಿಗಿ ನಿಯಮ
ಇ-ಕಾಮರ್ಸ್ ಕಂಪನಿಗಳು 2023ರ ಡಾರ್ಕ್ ಪ್ಯಾಟರ್ನ್ಗಳ ತಡೆ ಮತ್ತು ನಿಯಂತ್ರಣ ಮಾರ್ಗಸೂಚಿಗಳನ್ನ ಪಾಲಿಸಬೇಕಾಗುತ್ತದೆ. ಗ್ರಾಹಕರು ಸಾಮಾನ್ಯವಾಗಿ ತೆಗೆದುಕೊಳ್ಳದ ನಿರ್ಧಾರವನ್ನ ತೆಗೆದುಕೊಳ್ಳುವಂತೆ ಅವರ ಮೇಲೆ ಪ್ರಭಾವ ಬೀರುವ ಅಥವಾ ಅವರನ್ನ ದಾರಿ ತಪ್ಪಿಸುವ ರೀತಿಯ ವೆಬ್ಸೈಟ್ ವಿನ್ಯಾಸ ಹಾಗೂ ತಂತ್ರಗಳನ್ನ ‘ಡಾರ್ಕ್ ಪ್ಯಾಟರ್ನ್’ ಎಂದು ಕರೆಯಲಾಗುತ್ತದೆ.
ಹೊಸ ನಿಯಮಗಳ ಪ್ರಕಾರ, ಇ-ಕಾಮರ್ಸ್ ಸಂಸ್ಥೆಗಳು ಪ್ರತಿವರ್ಷ ಸ್ವಯಂ-ಪರಿಶೀಲನೆ (Self-Audit) ನಡೆಸಬೇಕು. ಜೊತೆಗೆ ನಿಯಮ ಪಾಲನೆಯ ಪ್ರಮಾಣಪತ್ರವನ್ನೂ ಪ್ರದರ್ಶಿಸಬೇಕಾಗುತ್ತದೆ.
5. ಆಮದು ಉತ್ಪನ್ನಗಳ ಮೂಲ ದೇಶದ ಮಾಹಿತಿ ನೀಡಬೇಕು
ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಕುರಿತು ಗ್ರಾಹಕರಿಗೆ ಆಮದುದಾರರ ವಿವರ ಹಾಗೂ ಉತ್ಪನ್ನದ ಮೂಲ ದೇಶ (Country of Origin)ದ ಮಾಹಿತಿಯನ್ನ ಒದಗಿಸಬೇಕು. ಉತ್ಪನ್ನ ಎಲ್ಲಿಂದ ಬರುತ್ತದೆ ಮತ್ತು ಅದನ್ನು ಭಾರತಕ್ಕೆ ಆಮದು ಮಾಡುತ್ತಿರುವವರು ಯಾರು ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಲು ಈ ನಿಯಮ ಸಹಕಾರಿಯಾಗಲಿದೆ.
6. ಖರೀದಿಸುವ ಮುನ್ನ ಹೆಚ್ಚಿನ ಉತ್ಪನ್ನ ಮಾಹಿತಿ ನೀಡಬೇಕು
ಮಾರ್ಕೆಟ್ಪ್ಲೇಸ್ ಮಾದರಿಯ ಇ-ಕಾಮರ್ಸ್ ವೇದಿಕೆಗಳು ಗ್ರಾಹಕರು ಉತ್ತಮ ನಿರ್ಧಾರ ಕೈಗೊಳ್ಳಲು ಅಗತ್ಯವಾದ ಪ್ರಮುಖ ಉತ್ಪನ್ನ ಮಾಹಿತಿಯನ್ನು ಖರೀದಿಗೂ ಮುನ್ನ ಒದಗಿಸಬೇಕು.
ಇದರಲ್ಲಿ ಪ್ರಮುಖವಾಗಿ:
* ಉತ್ಪನ್ನದ Best Before / Use Before ದಿನಾಂಕ
* ರಿಟರ್ನ್ ಮತ್ತು ರಿಫಂಡ್ ನೀತಿ
* ವಾರಂಟಿ ವಿವರಗಳು
* ವಿತರಣೆಯ (Delivery) ಮಾಹಿತಿ
* ಪಾವತಿಗೆ ಸಂಬಂಧಿಸಿದ ಮಾಹಿತಿ… ಮುಂತಾದ ವಿವರಗಳು ಸೇರಿವೆ.
ವಿಶೇಷವಾಗಿ ಆಹಾರ, ಔಷಧಿಯಲ್ಲದಿದ್ದರೂ ಅವಧಿ ಮುಗಿಯುವ ಸಾಧ್ಯತೆಯಿರುವ ಉತ್ಪನ್ನಗಳು ಸೇರಿದಂತೆ, ಬಳಕೆಯ ಅವಧಿ ಅಥವಾ ‘ಯೂಸ್ ಬಿಫೋರ್’ ದಿನಾಂಕವು ಖರೀದಿ ನಿರ್ಧಾರದ ಮೇಲೆ ಪರಿಣಾಮ ಬೀರುವ ವಸ್ತುಗಳಿಗೆ ಈ ನಿಯಮ ಹೆಚ್ಚು ಮಹತ್ವದ್ದಾಗಿದೆ.

7. ಗ್ರಾಹಕರ ಒಪ್ಪಿಗೆಯಿಲ್ಲದೆ ಹೆಚ್ಚುವರಿ ಶುಲ್ಕ, ಮಾಹಿತಿಯ ಬಳಕೆಗೆ ನಿರ್ಬಂಧ
ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರ ಮಾಹಿತಿಯನ್ನ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸುವ ಮೊದಲು ಗ್ರಾಹಕರ ಸ್ಪಷ್ಟ ಹಾಗೂ ಸಮ್ಮತಿಪೂರ್ವಕ ಒಪ್ಪಿಗೆ ಪಡೆಯಬೇಕು. ಇದರ ಜೊತೆಗೆ, ಇ-ಕಾಮರ್ಸ್ ವೇದಿಕೆಯ ಸೇವೆಗೆ ಸಂಬಂಧಿಸದ ಸೇವೆಗಳಿಗಾಗಿ ಗ್ರಾಹಕರಿಂದ ಬಂಡಲ್ ಮಾಡಿದ ಶುಲ್ಕಗಳನ್ನ ವಸೂಲಿ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಆದರೆ, ಲಾಯಲ್ಟಿ ಅಥವಾ ಸದಸ್ಯತ್ವ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಶುಲ್ಕಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪ್ರಕ್ರಿಯೆಗೆ ಇ-ಕಾಮರ್ಸ್ ಕಂಪನಿಗಳು ಸೇರ್ಪಡೆಯಾಗಬೇಕು
ಹೊಸ ತಿದ್ದುಪಡಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರತಿಯೊಂದು ಇ-ಕಾಮರ್ಸ್ ಸಂಸ್ಥೆ ʻರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline – NCH)ʼಯ ಕನ್ವರ್ಜೆನ್ಸ್ ಪ್ರಕ್ರಿಯೆಯಲ್ಲಿ ಪಾಲುದಾರರಾಗಬೇಕು. ಆನ್ಲೈನ್ ಶಾಪಿಂಗ್ನಲ್ಲಿ ಗ್ರಾಹಕರ ಹಕ್ಕುಗಳನ್ನು ಮತ್ತಷ್ಟು ಬಲಪಡಿಸುವುದು, ಬೆಲೆ ಮತ್ತು ಉತ್ಪನ್ನ ಮಾಹಿತಿಯಲ್ಲಿ ಪಾರದರ್ಶಕತೆ ತರುವುದು ಹಾಗೂ ಇ-ಕಾಮರ್ಸ್ ಕಂಪನಿಗಳ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಈ ತಿದ್ದುಪಡಿಗಳ ಪ್ರಮುಖ ಉದ್ದೇಶವಾಗಿದೆ.

